ಗೋಣಿಕೊಪ್ಪ ವರದಿ, ಆ. ೧೪: ಪೊನ್ನಂಪೇಟೆ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ೨೪೫ ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು.

ನ್ಯಾಯಾಧೀಶೆ ಕೆ. ಎಸ್. ಆಶಾ ಸಮ್ಮುಖದಲ್ಲಿ ಚೆಕ್, ಕೌಟುಂಬಿಕ ಕಲಹ ಸೇರಿದಂತೆ ಸಿವಿಲ್ ಕೇಸ್‌ಗಳ ಬಗ್ಗೆ ವಿಚಾರಣೆ ನಡೆಯಿತು. ಕಕ್ಷಿದಾರರ ಸಮಸ್ಯೆ ಆಲಿಸಿ, ರಾಜಿ ತೀರ್ಮಾನದ ಮೂಲಕ ಇತ್ಯರ್ಥ ಪಡಿಸಲಾಯಿತು. ಸುಮಾರು ೮೦೦ ಪ್ರಕರಣಗಳಲ್ಲಿ ಒಂದಷ್ಟು ಕಕ್ಷಿದಾರರು ಗೈರು ಹಾಜರಾದರು. ಒಂದಷ್ಟು ಪ್ರಕಣಗಳಲ್ಲಿ ಕಕ್ಷಿದಾರರು ರಾಜಿಗೆ ಒಪ್ಪಿಕೊಳ್ಳದೆ ತೀರ್ಮಾನಕ್ಕೆ ಹಿನ್ನಡೆಯಾಯಿತು. ಪೊನ್ನಂಪೇಟೆ ವಕೀಲರ ಸಂಘದ ಸದಸ್ಯರು ಅದಾಲತ್ ಯಶಸ್ವಿಗೆ ಕೈಜೋಡಿಸಿದರು.

ರಾಜಿ ತೀರ್ಮಾನದ ಮೂಲಕ ಪ್ರಕರಣವನ್ನು ಇತ್ಯರ್ಥ ಪಡಿಸಲು ಕಕ್ಷಿದಾರರು ಉತ್ಸಾಹ ತೋರಬೇಕು ಎಂದು ಪೊನ್ನಂಪೇಟೆ ವಕೀಲರ ಸಂಘದ ಕಳಕಂಡ ಡಿ. ಮುತ್ತಪ್ಪ ಮನವಿ ಮಾಡಿಕೊಂಡಿದ್ದಾರೆ. ಎರಡು ತಿಂಗಳಿಗೊಮ್ಮೆ ಲೋಕಾ ಅದಾಲತ್ ನಡೆಯುತ್ತದೆ. ಗೈರು ಹಾಜರಿ ಕ್ರಮ ಸರಿಯಲ್ಲ. ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವ ಅದಾಲತ್‌ನಲ್ಲಿ ಹೆಚ್ಚು ಕಕ್ಷಿದಾರರು ಪಾಲ್ಗೊಂಡು ನ್ಯಾಯ ಪಡೆದುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.