ಕುಶಾಲನಗರ, ಆ.೧೪: ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಹಿಂದು ಜಾಗರಣ ವೇದಿಕೆ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ಕುಶಾಲನಗರದಲ್ಲಿ ನಡೆಯಿತು. ಕುಶಾಲನಗರ ಬೈಚನಹಳ್ಳಿ ಶ್ರೀ ಮಾರಿಯಮ್ಮ ದೇವಸ್ಥಾನದಿಂದ ಹೊರಟ ಪಂಜಿನ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ನಂತರ ರಥ ಬೀದಿ ಮೂಲಕ ಮಾರುಕಟ್ಟೆ ರಸ್ತೆಯ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಸೇರಿ ಸಭೆ ನಡೆಸಿತು.
ಮಾಜಿ ಸೈನಿಕ ಹೆಚ್.ಎ ಚಿನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಹಿಂದು ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ದೊ. ಕೇಶವಮೂರ್ತಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ದುಬಾರೆ ಆನೆ ಮಾವುತರ ಕಾವಾಡಿಗರ ಸಂಘದ ಅಧ್ಯಕ್ಷರಾದ ಅಣ್ಣಯ್ಯ ದೊರೆಯಪ್ಪ ಅವರು ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಜಿಲ್ಲೆಯ ವಿವಿದೆಡೆಯ ಅಂದಾಜು ೧೫೦೦ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.