ಸಿದ್ದಾಪುರ, ಆ. ೧೩: ನೆಲ್ಯಹುದಿಕೇರಿಯ ಸರ್ಕಾರಿ ಶಾಲಾ ಆವರಣದೊಳಗೆ ನುಗ್ಗಿದ ಕಾಡಾನೆಗಳು ದಾಂಧಲೆ ನಡೆಸಿ ಬಾಳೆಗಿಡಗಳನ್ನು ಧ್ವಂಸಗೊಳಿಸಿವೆ. ನೆಲ್ಯಹುದಿಕೇರಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗೊಳಗೆ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಇದೀಗ ಕಾಡಾನೆಗಳು ಪಟ್ಟಣ ವ್ಯಾಪ್ತಿಯಲ್ಲಿ ಹಾಗೂ ಶಾಲಾ ಆವರಣದೊಳಗೆ ಕಂಡು ಬರುತ್ತಿದ್ದು, ಕಾಡಾನೆಗಳು ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಕಚೇರಿ ಸಮೀಪದಲ್ಲಿರುವ ಸರ್ಕಾರಿ ಶಾಲೆಯ ಆವರಣದೊಳಗೆ ನುಗ್ಗಿದೆ. ಅಲ್ಲಿ ಬೆಳೆದು ನಿಂತಿದ್ದ ಬಾಳೆ ಗಿಡಗಳನ್ನು ಹಾಗೂ ಹೂ ಗಿಡಗಳನ್ನು ಎಳೆದು ತಿಂದು ನಾಶಗೊಳಿಸಿದೆ. ಕಾಡಾನೆಗಳು ನೆಲ್ಯಹುದಿಕೇರಿ, ಬೆಟ್ಟದಕಾಡು, ಅತ್ತಿಮಂಗಲ, ನೆಲ್ವತ್ತೇಕೆರೆ ಸೇರಿದಂತೆ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಫಸಲುಗಳನ್ನು ನಾಶಗೊಳಿಸುತ್ತಿದೆ. ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.