ಸೋಮವಾರಪೇಟೆ, ಆ. ೧೨: ಸಮೀಪದ ಬೇಳೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇಂದು ಬೆಳಗ್ಗಿನ ಜಾವ ಗ್ರಾಮದ ಶ್ರೀಕಂಠ ಎಂಬವರ ಮನೆಯ ಹಿಂಭಾಗವೇ ಇರುವ ತೋಟಕ್ಕೆ ದಾಳಿಯಿಟ್ಟ ಒಂಟಿ ಆನೆ ತೆಂಗು, ಅಡಿಕೆ, ಬಾಳೆ ಗಿಡಗಳನ್ನು ನಾಶಪಡಿಸಿದೆ. ಮನೆಯ ಹಿಂದೆ ಉಂಟಾದ ಶಬ್ದಕ್ಕೆ ಎಚ್ಚರಗೊಂಡ ಶ್ರೀಕಂಠ ಅವರು ಹೊರಗೆ ಬಂದ ಸಂದರ್ಭ ಕಾಡಾನೆ ಧಾಳಿ ನಡೆಸಲು ಮುಂದಾಗಿದೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಅಕ್ಕಪಕ್ಕದ ಮನೆಗಳ ಆವರಣಕ್ಕೂ ನುಗ್ಗಿರುವ ಆನೆ ದನಕರುಗಳಿಗೆ ಸಂಗ್ರಹಿಸಿಟ್ಟಿದ್ದ ಹುಲ್ಲನ್ನು ತಿಂದು, ತುಳಿದು ನಾಶಪಡಿಸಿದೆ. ಮತ್ತೊಂದು ಮನೆಯ ನೀರಿನ ಟ್ಯಾಂಕ್ ನ್ನು ಒಡೆದು ಹಾಕಿದೆ. ಇತ್ತೀಚೆಗೆ ಬೇಳೂರು ಸುತ್ತಮುತ್ತಲಿನಲ್ಲಿ ದಿನನಿತ್ಯ ಆನೆಗಳು ಓಡಾಡುತ್ತಿರುವುದರಿಂದ ಭಯದಿಂದ ಬದುಕುವಂತಾಗಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಇಲಾಖೆ ಮುಂದಾಗಬೇಕೆAದು ಗ್ರಾಮಸ್ಥರು ಆಗ್ರಹಿಸಿದ್ದಾರೆ.