ಸೋಮವಾರಪೇಟೆ, ಆ. ೧೨: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ರಸ್ತೆಯಲ್ಲಿ ನೂತನವಾಗಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಸಂಬAಧಿಸಿದAತೆ, ಪ.ಪಂ. ಅಧೀನದಲ್ಲಿದ್ದ ೩ ಸೆಂಟ್ ಜಾಗವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಲಾಯಿತು.

ಇಲ್ಲಿನ ಶಾಸಕರ ಕಚೇರಿಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ನಿವೇಶನದ ದಾಖಲೆಗಳನ್ನು ಇಲಾಖೆಯ ಅಧಿಕಾರಿ ಅಣ್ಣಯ್ಯ ಅವರಿಗೆ ಹಸ್ತಾಂತರಿಸಿ, ಶೀಘ್ರವಾಗಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಹಿಂದೆ ಬಸವೇಶ್ವರ ರಸ್ತೆಯ ಶಿಥಿಲಾವಸ್ಥೆಯ ಮನೆಯೊಂದರಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು, ಅಪಾಯದ ಮುನ್ಸೂಚನೆಯ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ವಾರ್ಡ್ ಸದಸ್ಯ ಮೃತ್ಯುಂಜಯ ಅವರು ಮಕ್ಕಳ ಹಿತದೃಷ್ಟಿಯಿಂದ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಅಂಗನವಾಡಿ ಕೇಂದ್ರವನ್ನು ಮಹಿಳಾ ಸಮಾಜಕ್ಕೆ ಸ್ಥಳಾಂತರಿಸಿದ್ದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ೫ ಅಂಗನವಾಡಿಗಳ ಪೈಕಿ ೪ ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಸವೇಶ್ವರ ರಸ್ತೆಯ ಅಂಗನವಾಡಿ ಮಾತ್ರ ಬಾಡಿಗೆ ಕಟ್ಟಡದಲ್ಲಿ ಈವರೆಗೆ ಕಾರ್ಯಾಚರಿಸುತ್ತಿತ್ತು. ಇದನ್ನು ಮನಗಂಡ ಸದಸ್ಯ ಮೃತ್ಯುಂಜಯ ಅವರು, ವಾರ್ಡ್ನಲ್ಲಿರುವ ಪ.ಪಂ.ಗೆ ಸೇರಿದ ನಿವೇಶನವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಹಿಸುವಂತೆ ಕ್ಷೇತ್ರದ ಶಾಸಕ ರಂಜನ್, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು ಸೇರಿದಂತೆ ಇತರರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

ಅದರಂತೆ ೩ ಸೆಂಟ್ ನಿವೇಶನವನ್ನು ಅಧಿಕೃತವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ವಾರ್ಡ್ ಸದಸ್ಯ ಮೃತ್ಯುಂಜಯ, ಬಿ.ಆರ್. ಮಹೇಶ್, ಮುಖ್ಯಾಧಿಕಾರಿ ನಾಚಪ್ಪ, ನಾಮನಿರ್ದೇಶಿತ ಸದಸ್ಯರಾದ ಎಸ್. ಮಹೇಶ್, ಎಸ್.ಆರ್. ಸೋಮೇಶ್, ಶರತ್‌ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.