ಪೊನ್ನಂಪೇಟೆ, ಆ. ೧೨: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಆನೆ ಚೌಕೂರು ವನ್ಯ ಜೀವಿ ವಲಯದ ಸಹಯೋಗದಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ವಿಶ್ವ ಆನೆಗಳ ದಿನಾಚರಣೆಯ ಅಂಗವಾಗಿ ಮತ್ತಿಗೋಡು ಆನೆ ಶಿಬಿರದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷೆ ಜೆ.ಕೆ. ಸುಬಾಷಿಣಿ ಪೂಜೆ ಸಲ್ಲಿಸಿ ಮಾತನಾಡಿ ವಿಶ್ವ ಆನೆಗಳ ದಿನಾಚರಣೆ ಹಿನ್ನೆಲೆಯನ್ನು ತಿಳಿಸುತ್ತಾ ಏಷ್ಯನ್ ಮತ್ತು ಆಫ್ರಿಕನ್ ಆನೆಗಳಿಗೆ ಉಂಟಾಗಿರುವ ಸಂಕಷ್ಟದ ಬಗ್ಗೆ ಅರಿವು ಮೂಡಿಸಲು ಆನೆ ದಿನಾಚರಣೆಯನ್ನು ಪ್ರಾರಂಭಿಸಲಾಯಿತು. ಮೊದಲಿಗೆ ಕೆನೆಡಿಯನ್ ಸಿನಿಮಾ ಮೇಕರ್ ಪ್ಯಾಬ್ರಿಕಾಸಿಮ್ ಮತ್ತು ಥೈಲ್ಯಾಂಡ್ ಮೂಲದ ಆನೆಗಳ ಮರು ಪರಿಚಯ ಪ್ರತಿಷ್ಠಾನ ಜೊತೆಗೂಡಿ ಆನೆಗಳ ದಿನಾಚರಣೆ ಆರಂಭಿಸಿದರು. ವಿಶ್ವ ಆನೆಗಳ ದಿನ ಪ್ಯಾಟ್ರಿಕಾ ಸಿಮ್ ನೇತೃತ್ವದಲ್ಲಿ ಪ್ರಾರಂಭವಾಯಿತು. ಆಕೆ ಸ್ಥಾಪಿಸಿದ ವಿಶ್ವ ಆನೆಗಳ ಸಮಾಜ, ಈ ವಿಶ್ವ ಆನೆಗಳ ದಿನವನ್ನು ನಿರ್ವಹಣೆ ಮಾಡಿತ್ತು ಎಂದು ಮಾಹಿತಿ ನೀಡಿದ ಅವರು ರೋಟರಿ ಕ್ಲಬ್ ವತಿಯಿಂದ ಎರಡನೇ ವರ್ಷದ ವಿಶ್ವ ಆನೆಗಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದರು.

ಹುಣಸೂರು ವನ್ಯಜೀವಿ ಉಪ ವಿಭಾಗದ ಎ. ಸಿ. ಎಫ್. ದಯಾನಂದ್ ಮಾತನಾಡಿ ವಿಶ್ವ ಆನೆಗಳ ದಿನಾಚರಣೆ ಮೊದಲು ಪ್ರಾರಂಭವಾಗಿದ್ದು ೨೦೧೨ ರ ಆಗಸ್ಟ್ ೧೨ ರಂದು. ಆನೆಗಳು ಸಹ ಮನುಷ್ಯರಂತೆಯೇ ಕುಟುಂಬ ಜೀವನವನ್ನು ನಡೆಸುತ್ತವೆ. ಸಾಮಾನ್ಯವಾಗಿ ಹೆಣ್ಣು ಆನೆಗಳು ತಮ್ಮ ಜೀವನವನ್ನು ಸಂಪೂರ್ಣವಾಗಿ ಕುಟುಂಬ ವ್ಯವಸ್ಥೆಯಲ್ಲಿ ಕಳೆಯುತ್ತವೆ. ಆನೆಗಳ ಕುಟುಂಬವು ೫ ರಿಂದ ೧೫ ಆನೆಗಳನ್ನು ಒಳಗೊಂಡಿರುತ್ತದೆ. ಗಜರಾಜ ಎಂದಾಗ ಸಾರ್ವಜನಿಕರಿಗೆ ಎಷ್ಟು ಭಯವೋ ಅಷ್ಟೇ ಪ್ರೀತಿಯು ಇದೆ. ಗಜರಾಜನನ್ನು ನಮ್ಮ ದೇಶದಲ್ಲಿ ಪೂಜಿಸಲಾಗುತ್ತದೆ. ಅಂತಹ ಗಜರಾಜನ ದಿನವನ್ನು ಜಗತ್ತಿನಾದ್ಯಂತ ಪ್ರತಿವರ್ಷ ಆಚರಿಸಲಾಗುತ್ತದೆ ಎಂದರು.

ರೋಟರಿ ಕ್ಲಬ್ ವತಿಯಿಂದ ಆನೆಗಳಿಗೆ ಬಾಳೆಹಣ್ಣು, ಬೆಲ್ಲ ಹಾಗೂ ಆಹಾರ ತಯಾರು ಮಾಡಲು ೧೦೦ ಕೆಜಿ ಅಕ್ಕಿಯನ್ನು ನೀಡಲಾಯಿತು. ಇದೆ ಸಂದರ್ಭ ಆನೆಗಳನ್ನು ನೋಡಿಕೊಳ್ಳಲು ಆಯ್ಕೆ ಮಾಡಿದ ಕಾವಾಡಿಗಳಿಗೆ ಮತ್ತು ಮಾವುತರಿಗೆ ಸನ್ಮಾನ ಮಾಡಲಾಯಿತು. ಆನೆ ಮಾವುತ ಅಶೋಕ, ಕಾವಾಡಿಗಳಾದ ವಿಶ್ವ, ಶ್ರೀರಂಗ, ವೆಂಕಟೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

೭೫ನೇ ಸ್ವಾತಂತ್ರೋತ್ಸವದ ಅಮೃತೋತ್ಸವ ಆಚರಣೆಗಾಗಿ ಅಲ್ಲಿ ವಾಸ ಮಾಡುವವರಿಗೆ ಬಾವುಟಗಳನ್ನು ನೀಡಲಾಯಿತು.

ರೋಟರಿ ಕ್ಲಬ್ ಸದಸ್ಯರಾದ ಡಾ. ಚಂದ್ರಶೇಖರ್, ಬೀಟಾ ಲಕ್ಷ್ಮಣ್, ಸಜನ್ ಚಂಗಪ್ಪ, ಕೆ.ಬಿ ನೆವಿನ್, ಪಿ.ಆರ್ ವಿಜಯ್, ಹುಣಸೂರು ವನ್ಯಜೀವಿ ಉಪವಿಭಾಗದ ಎ.ಸಿ.ಎಫ್ ದಯಾನಂದ್, ನಾಗರಹೊಳೆ ವನ್ಯಜೀವಿ ಉಪವಿಭಾಗದ ಎ.ಸಿ.ಎಫ್ ಕೆ.ಪಿ. ಗೋಪಾಲ್, ಆರ್.ಎಫ್.ಒ.ಗಳಾದ ಅಶೋಕ್, ತೀರ್ಥ, ಹನುಮಂತರಾಜು, ವೀರ ಹೊಸಹಳ್ಳಿ ನಮನ ನಾರಾಯಣ, ಹುಣಸೂರು ಆನೆಚೌಕೂರ್‌ನ ಹನುಮಂತರಾಜು, ಗಿರೀಶ್, ಸಿಬ್ಬಂದಿಗಳು, ಮಾವುತರು, ಕಾವಾಡಿಗಳು, ತಿತಿಮತಿ ಗಣಪತಿ ದೇವಸ್ಥಾನ ತಂತ್ರಿ ಗಣೇಶ್ ಬಾರ್ಗವ್, ನೋಕ್ಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕರಾದ ಪ್ರೇಮ, ವನಜ, ಮಜ್ಜಿಗೆಹಳ್ಳ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸೈಫುನ್ನಿಸ, ವಿದ್ಯಾರ್ಥಿಗಳು ಹಾಜರಿದ್ದರು.