ಕುಶಾಲನಗರ, ಆ.೧೨: ಪಟ್ಟಣ ಪಂಚಾಯಿತಿಗೆ ಸೇರಿದ ಸಾರ್ವಜನಿಕ ಆಸ್ತಿ ಯಾವುದೇ ರೀತಿಯಲ್ಲಿ ಖಾಸಗಿ ವ್ಯಕ್ತಿಗಳ ಪಾಲಾಗದಂತೆ ಪಂಚಾಯತಿ ಅಧಿಕಾರಿಗಳು ಮತ್ತು ಕಾನೂನು ಸಲಹೆಗಾರರು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕು ಎಂದು ಸದಸ್ಯರು ಆಗ್ರಹಿಸಿದ್ದಾರೆ.

ಕುಶಾಲನಗರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ ವಿಶೇಷ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕುಶಾಲನಗರ ಪಟ್ಟಣದ ಹಲವು ಸಾರ್ವಜನಿಕ ಸ್ಥಳಗಳು ನ್ಯಾಯಾಲಯದಲ್ಲಿ ಸಮರ್ಪಕ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಖಾಸಗಿ ವ್ಯಕ್ತಿಗಳ ಪರವಾಗಿ ತೀರ್ಪು ಹೊರ ಬೀಳುತ್ತಿದೆ ಎನ್ನುವ ಆತಂಕವನ್ನು ಹಲವು ಸದಸ್ಯರು ಸಭೆಯಲ್ಲಿ ವ್ಯಕ್ತಪಡಿಸಿದರು.

ಇದಕ್ಕೆ ಪಂಚಾಯಿತಿ ಅಧ್ಯಕ್ಷರು ಮುಖ್ಯ ಅಧಿಕಾರಿ ಮತ್ತು ಕಾನೂನು ಸಲಹೆಗಾರರು ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮತ್ತು ಕಾನೂನು ಸಲಹೆಗಾರರು ಸಮಜಾಯಿಸಿಕೆ ನೀಡಬೇಕೆಂದು ಒತ್ತಾಯಿಸಿದರು.

ಕುಶಾಲನಗರ ಪಟ್ಟಣದ ವಾಣಿಜ್ಯ ಸಂಕೀರ್ಣ ನಿರ್ಮಾಣ ಹಿನ್ನೆಲೆಯಲ್ಲಿ ಹಳೆಯ ಕೆಲವು ಬಾಡಿಗೆದಾರರು ಮಳಿಗೆ ಕಟ್ಟಡ ತೆರವುಗೊಳಿಸದೆ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದು ಈ ಬಗ್ಗೆ ಹೊರ ಬಿದ್ದ ತೀರ್ಪಿನ ಬಗ್ಗೆ ಸದಸ್ಯರಾದ ಕೆ.ಜಿ. ಮನು, ಎಂ.ವಿ. ನಾರಾಯಣ್, ಪ್ರಮೋದ್ ಮುತ್ತಪ್ಪ ಅಮೃತ್ ರಾಜ್, ವಿ.ಎಸ್. ಆನಂದ್ ಕುಮಾರ್ ಅಧಿಕಾರಿಗಳು ಮತ್ತು ಕಾನೂನು ಸಲಹೆಗಾರರಿಂದ ಮಾಹಿತಿ ಬಯಸಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ಅವರು ದಾಖಲೆ ಸಹಿತ ಹಲವು ಮಾಹಿತಿಗಳನ್ನು ಸಭೆಗೆ ನೀಡಿದರು.

ನ್ಯಾಯಾಲಯಕ್ಕೆ ಪಟ್ಟಣ ಪಂಚಾಯಿತಿಯಿAದ ಒದಗಿಸಲಾದ ಅಗತ್ಯವಾದ ದಾಖಲೆಗಳನ್ನು ನೀಡಿರುವ ಬಗ್ಗೆ ಕಾನೂನು ಸಲಹೆಗಾರರು ಸಭೆಯ ಗಮನಕ್ಕೆ ತಂದರು.. ಪಂಚಾಯಿತಿಯ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗದಂತೆ ಹೊಣೆ ವಹಿಸುವಂತೆ ಪಂಚಾಯತಿ ಸದಸ್ಯರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಸುರಯ್ಯ ಬಾನು, ಸದಸ್ಯರಾದ ಪ್ರಮೋದ್ ಮುತ್ತಪ್ಪ, ಡಿ.ಕೆ. ತಿಮ್ಮಪ್ಪ, ಎಂ.ವಿ. ನಾರಾಯಣ, ವಿ.ಎಸ್. ಆನಂದ್ ಕುಮಾರ್, ಅಮೃತ್‌ರಾಜ್ ಸೇರಿದಂತೆ ಅಧಿಕಾರಿಗಳು, ಕಾನೂನು ಸಲಹೆಗಾರ ಆರ್.ಕೆ. ನಾಗೇಂದ್ರ ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಇದ್ದರು.