ಸೋಮವಾರಪೇಟೆ, ಆ. ೧೨: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಚೌಡ್ಲು ಮಾರಿಯಮ್ಮ ದೇವಾಲಯ ಸಮೀಪ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್. ಮಹೇಶ್, ಸಾಮಾಜಿಕ ಕಳಕಳಿ ಇರುವವರಿಂದ ಮಾತ್ರ ಸಮಾಜದಲ್ಲಿ ಜಾಗೃತಿ ಹಾಗೂ ಬದಲಾವಣೆ ತರಲು ಸಾಧ್ಯ. ಉತ್ತಮ ಹಾಗೂ ಸುಭೀಕ್ಷ ಸಮಾಜ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ತಳಪಾಯವಾಗಿದೆ ಎಂದರು.
ಚೌಡ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಸುಬ್ರಮಣಿ ಮಾತನಾಡಿ, ಪ್ರತಿಯೊಬ್ಬ ನಾಗರಿಕರಿಗೂ ಜವಾಬ್ದಾರಿ ಇದೆ; ಪರಿಸರದ ಸ್ವಚ್ಛತೆಯನ್ನು ಎಲ್ಲರೂ ಪಾಲಿಸಲೇಬೇಕು. ಅದು ನಮ್ಮೆಲ್ಲರ ಕರ್ತವ್ಯ ಎಂದು ಅಭಿಪ್ರಾಯಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ. ನಮ್ಮ ಪರಿಸರ ಹತ್ತಿರದ ಧಾರ್ಮಿಕ ಕೇಂದ್ರಗಳನ್ನು ಶುಚಿಯಾಗಿಟ್ಟುಕೊಳ್ಳಬೇಕೆಂದರು.
ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್, ಮಾರಿಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ರಾಮದಾಸ್, ಶಾಂತಳ್ಳಿ ವಲಯ ಮೇಲ್ವಿಚಾರಕಿ ಕಲಾವತಿ, ಒಕ್ಕೂಟದ ಅಧ್ಯಕ್ಷೆ ಲತಾ, ಸೇವಾ ಪ್ರತಿನಿಧಿಗಳಾದ ಲೀಲಾ, ನಿಖಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.