ಮಡಿಕೇರಿ, ಆ. ೧೨: ಕೊಡವ ಭಾಷೆಯಲ್ಲಿ ಅನೇಕ ಉತ್ತಮ ಪುಸ್ತಕಗಳು ಪ್ರಕಟಗೊಂಡಿವೆ. ಆದರೆ, ಅವುಗಳನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವಲ್ಲಿ ಹಾಗೂ ಮನ್ನಣೆ ದೊರಕಿಸುವಲ್ಲಿ ಅಕಾಡೆಮಿ, ಸಾಹಿತ್ಯಪರ ಸಂಘ-ಸAಸ್ಥೆಗಳು, ವೈಫಲ್ಯ ಸಾಧಿಸಿವೆ. ಮುಂದಿನ ದಿನಗಳಲ್ಲಿ ಪುಸ್ತಕಗಳ ಮಹತ್ವ ಹಾಗೂ ಅದರಲ್ಲಿರುವ ವಿಷಯವನ್ನು ಪಸರಿಸುವ ದೂರದರ್ಶಿತ್ವ ಕೆಲಸ ಆಗಬೇಕೆಂದು ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಅಭಿಪ್ರಾಯ ವ್ಯಕ್ತಪಡಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ತ್ರಿಭಾಷ ಸಾಹಿತಿ ಮಂಡೀರ ದಿ. ಜಯಾ ಅಪ್ಪಣ್ಣ ವಿರಚಿತ ‘ಕೊಡವ ಜಯಾಭಾರತ’ ಮಹಾಕಾವ್ಯದ ಕನ್ನಡ ಅನುವಾದಿತ ಪುಸ್ತಕ ಬಿಡುಗಡೆ ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಗೊಳಿಸಲಾಯಿತು.

(ಮೊದಲ ಪುಟದಿಂದ) ಪುಸ್ತಕದ ಕುರಿತು ವಿಚಾರ ಮಂಡನೆ ಮಾಡಿ ಮಾತನಾಡಿದ ಸುಬ್ರಾಯ ಸಂಪಾಜೆ ಅವರು, ಮಹಾಭಾರತ ಗ್ರಂಥಕ್ಕೆ ಮೊದಲು ಜಯ ಎಂದು ಹೆಸರಿತ್ತು. ೭೦೦ ಶ್ಲೋಕಗಳನ್ನು ಹೊಂದಿರುವ ಭಗವದ್ಗೀತೆಯನ್ನು ಕೊಡವ ಭಾಷೆಯಲ್ಲಿ ಇಲ್ಲಿನ ಶೈಲಿಗೆ ಹೊಂದುವAತೆ ಜಯಾ ಅಪ್ಪಣ್ಣ ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಅವಿಸ್ಮರಣೀಯರಾಗಿದ್ದಾರೆ. ಕೊಡಗಿನ ನೆಲದಲ್ಲಿ ನಡೆಯುವಂತೆ ಚಿತ್ರಿಸಿರುವ ಈ ಮಹಾಕಾವ್ಯ ಕೊಡಗಿನ ಸಂಸ್ಕೃತಿ, ಆರಾಧಾನ ಪದ್ಧತಿಗೆ ದೊಡ್ಡ ಗೌರವದಂತೆ. ಅನುವಾದದ ಮೂಲಕ ಈ ಕಾವ್ಯಕ್ಕೆ ಮತ್ತಷ್ಟು ಮನ್ನಣೆ ದೊರೆತಂತಾಗಿದೆ. ಜಯಾ ಅಪ್ಪಣ್ಣ ಇಲ್ಲದಿದ್ದರು ಅವರ ಕಾವ್ಯ ಶಾಶ್ವತವಾಗಿ ಜನರ ಮನಸಿನಲ್ಲಿ ನೆಲೆಯೂರಬೇಕು. ಕೊಡವ ಜಯಾಭಾರತ ಮುದ್ರಣವಾಗಿ ೧೦ ವರ್ಷಗಳು ಕಳೆದಿವೆ. ಆದರೆ, ಅದಕ್ಕೆ ಸಿಗಬೇಕಾದ ಮನ್ನಣೆ ದೊರೆತಿಲ್ಲ. ಇದೇ ರೀತಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ, ಐ.ಮಾ.ಮುತ್ತಣ್ಣ ಸೇರಿದಂತೆ ಅನೇಕರು ರಚಿಸಿರುವ ಪುಸ್ತಕಗಳು ಇಂದಿನ ಜನರಿಗೆ ತಲುಪಿಲ್ಲ. ಈ ಬಗ್ಗೆ ಅಕಾಡೆಮಿ, ಸಂಘ-ಸAಸ್ಥೆ, ಮಾಧ್ಯಮಗಳು ಮುಂದೆ ಬರಬೇಕು. ಕೊಡವ ಪುಸ್ತಕಗಳನ್ನು ಪರಿಚಯಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಾಹಿತಿ ನಾಗೇಶ್ ಕಾಲೂರು ಜಯ ಅಪ್ಪಣ್ಣ ಅವರ ಮೂಲಕೃತಿಯ ಸ್ವರೂಪವನ್ನು ಹಾಳು ಮಾಡಿಲ್ಲ. ಉತ್ತಮ ಪದಜೋಡಣೆ ಮೂಲಕ ಮಹಾಕಾವ್ಯದ ವ್ಯಾಪ್ತಿ ಹೆಚ್ಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಮತ್ತೊಂದು ಕೊಡುಗೆ ನೀಡಿದ್ದಾರೆ ಎಂದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ಅನೇಕ ಪ್ರಾದೇಶಿಕ ಭಾಷೆಗಳಿಗೆ ಲಿಪಿ ಇಲ್ಲ. ಇವುಗಳಿಗೆ ಕನ್ನಡ ಮಾತೃಭಾಷೆಯಾಗಿದೆ. ಅನುವಾದ ಸಾಹಿತ್ಯ ಅಪರೂಪದ ಕಲೆ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಅನುವಾದ ಮಾಡಬೇಕಾದರೆ ಪೂರ್ಣ ಹಿಡಿತ ಇರಬೇಕು. ಮೂಲ ಲೇಖಕರ ಮನಸ್ಥಿತಿಗೆ ಬರಬೇಕು. ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ. ಅದು ನಮ್ಮ ಸಂಸ್ಕೃತಿ, ಪರಂಪರೆ, ಪದ್ಧತಿ, ಜೀವನಶೈಲಿಯ ಪ್ರತಿಬಿಂಬವಾಗಿದೆ. ನಮ್ಮ ಚಿಂತನೆಗಳಿಗೆ ಭಾಷೆ ಆಕಾರ ನೀಡುತ್ತದೆ. ಭಾಷೆಯ ಬೆಳವಣಿಗೆಗೆ ಸಾಹಿತ್ಯ ಅಗತ್ಯವಾಗಿದೆ. ಜೊತೆಗೆ ಅನುವಾದವೂ ಪ್ರಮುಖ ಪಾತ್ರ ವಹಿಸುತ್ತದೆ. ಜಾಗತಿಕ ಮಟ್ಟದಲ್ಲಿ ಭಾಷೆ ತಲುಪಬೇಕು ಎಂದು ಹೇಳಿದ ಅವರು, ಕೊಡವ ಜಯಾಭಾರತ ಮಹಾಕಾವ್ಯವನ್ನು ಹಿರಿಯ ಸಾಹಿತಿ ನಾಗೇಶ್ ಕಾಲೂರು ಅಚ್ಚುಕಟ್ಟಾಗಿ ಅನುವಾದಿಸಿ ಕೊಡವ ಸಂಸ್ಕೃತಿ ಪರಿಚಯಿಸುವ ಕೆಲಸ ಮಾಡಿದ್ದಾರೆ. ಅವರ ಸಾಹಿತ್ಯ ಕೃಷಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ನಾಗೇಶ್ ಕಾಲೂರು ಅನುವಾದಿಸಿರುವ ಪುಸ್ತಕದಿಂದ ಜಯಾ ಅಪ್ಪಣ್ಣ ಅವರ ಗಟ್ಟಿತನದ ಸಾಹಿತ್ಯ ಎಲ್ಲರಿಗೂ ತಿಳಿಯುವಂತಾಗಿದೆ. ಧರ್ಮಗ್ರಂಥ, ಪಟ್ಟೋಲೆ ಪಳಮೆಯಂತೆ ಈ ಕೃತಿ ಪ್ರತಿ ಮನೆಯಲ್ಲಿ ಸ್ಥಾನ ಪಡೆಯಬೇಕು. ತರ್ಜುಮೆಯಿಂದ ಪುಸ್ತಕದಲ್ಲಿ ಅಡಗಿರುವ ವಿಷಯದ ವ್ಯಾಪ್ತಿ ಹೆಚ್ಚಾಗುತ್ತದೆ. ಅಲ್ಲದೇ ಕೊಡವ ಪುಸ್ತಕಗಳ ಅನುವಾದದಿಂದ ಕೊಡವ ಭಾಷೆ ೮ನೇ ಪರಿಚ್ಛೇದಕ್ಕೆ ಸೇರಬೇಕೆಂಬ ಬೇಡಿಕೆಗೆ ಬಲ ಬರುತ್ತದೆ. ಹಾಗೆಯೇ ಕೊಡವ ಭಾಷೆಗೆ ಸ್ಥಾನಮಾನ ಸಿಗುವ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ಮಾಡಲಾಗಿದೆ. ಜೊತೆಗೆ ಕೊಡವ ಲಿಪಿ ಬಳಸುವ ಸಲುವಾಗಿ ಪ್ರಕ್ರಿಯೆಗಳು ನಡೆಯುತ್ತಿವೆ. ಹಲವು ಸಾಹಿತಿಗಳು ಕೊಡವ ಲಿಪಿಯನ್ನು ಸೃಷ್ಟಿಸಿದ್ದಾರೆ. ಇದರಲ್ಲಿ ಯಾವುದು ಬಳಕೆಗೆ ಯೋಗ್ಯ, ತಾಂತ್ರಿಕತೆಯಲ್ಲಿ ಅಳವಡಿಸಬಹುದು ಎಂಬ ನಿಟ್ಟಿನಲ್ಲಿ ಕೆಲಸವಾಗಬೇಕಾಗಿದೆ. ಇದರೊಂದಿಗೆ ಐ.ಮಾ.ಮುತ್ತಣ್ಣ ಅವರ ಕೃತಿಯನ್ನು ಮರುಮುದ್ರಣ ಮಾಡಲಾಗುತ್ತದೆ ಎಂದು ವಿವರಿಸಿದರು.

ಕೊಡಗಿನಲ್ಲಿ ಮಹಾಭಾರತ ನಡೆದರೆ ಹೇಗಿರುತ್ತೆ ಎಂಬ ಚಿಂತನೆ ಈ ಪುಸ್ತಕದಲ್ಲಿ ಅನಾವರಣಗೊಂಡಿದೆ. ಪ್ರತಿ ಪಾತ್ರ ಕೊಡವರು, ಕೊಡವ ಭಾಷಿಕರಾಗುತ್ತಾರೆ. ಕೊಡಗಿನ ಭೌಗೋಳಿಕ ಹಿನ್ನೆಲೆಯಲ್ಲಿ ಸಾಗುತ್ತದೆ ಎಂದು ಹೇಳಿದರು.

ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ, ಬರಹಗಳು ನವರಸಭರಿತವಾಗಿರಬೇಕು. ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಕೊಡವ ಸಾಹಿತ್ಯ ಕಲಬೆರಕೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಕೊಡವ ಪದಗಳಿಗೆ ಸರಿಯಾದ ಪರ್ಯಾಯ ಕನ್ನಡ ಪದ ಹುಡುಕಿ ಬರೆದಿರುವುದು ಗೋಚರಿಸುತ್ತದೆ. ಇದು ಪುಸ್ತಕದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟಾçರ್ ಅಜ್ಜಿಕುಟ್ಟೀರ ಗಿರೀಶ್, ಸಾಹಿತಿ ನಾಗೇಶ್ ಕಾಲೂರು, ಸಾಹಿತಿ ಮಂಡೀರ ದಿ.ಜಯಾ ಅಪ್ಪಣ್ಣ ಅವರ ಪುತ್ರ ವಿವೇಕ್ ಚಂಗಪ್ಪ ಹಾಜರಿದ್ದರು.