ಕಣಿವೆ, ಆ. ೧೦: ಇದೀಗ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಹಾಗೂ ಹಾರಂಗಿ ನದಿ ಪಾತ್ರದ ತಗ್ಗು ಪ್ರದೇಶಗಳ ನಿವಾಸಿಗಳಲ್ಲಿ ಮತ್ತದೇ ಪ್ರವಾಹದ ಆತಂಕ ಹಾಗೂ ನೀರಿನ ಭಯ ಆವರಿಸಿದೆ. ಕಳೆದ ಮೂರು ವರ್ಷಗಳಿಂದಲೂ ಇದೇ ಆಗಸ್ಟ್ ತಿಂಗಳಿನಲ್ಲಿ ಇದೇ ಆಶ್ಲೇಷಾ ಮಳೆಯ ನೆರೆ ಆವರಿಸಿ ಕಾವೇರಿ ನದಿ ದಂಡೆಯ ವಾಸಿಗಳಲ್ಲಿ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿತ್ತು.
ಅದೇ ರೀತಿ ಈ ಬಾರಿಯು ಆಗಸ್ಟ್ ತಿಂಗಳು ಬಂದಿದೆ. ಅದೇ ಆಶ್ಲೇಷಾ ಮಳೆ ಎಡೆಬಿಡದೆ ಸುರಿಯುತ್ತಿದೆ. ಕಳೆದ ಜುಲೈ ೬ ರಿಂದ ೧೯ ರವರೆಗೆ ೧೩ ದಿನಗಳ ಕಾಲ ಸುರಿದ ಮಳೆಗೆ ಕಾವೇರಿ ನದಿಯಲ್ಲಿ ಒಂದು ಹಂತದ ಪ್ರವಾಹ ಬಂತಾದರೂ ತಗ್ಗು ಪ್ರದೇಶದ ಮನೆಗಳಿಗೆ ಇನ್ನೇನು ನೆರೆ ಆವರಿಸಬೇಕು ಅನ್ನುವಷ್ಟರಲ್ಲಿ ಮಳೆಯ ಪ್ರಮಾಣ ಕ್ಷೀಣಗೊಂಡಿತ್ತು.
ಹೀಗೆ ಜುಲೈ ಕೊನೆಯ ವಾರದಲ್ಲಿ ಕಡಿಮೆಯಾಗಿದ್ದ ಮಳೆ ಮತ್ತೆ ಆಗಸ್ಟ್ ಆರಂಭದಲ್ಲಿ ಅವತರಿಸಿದೆ. ಆಶ್ಲೇಷಾ ಮಳೆ ಹುಟ್ಟಿದ ಆಗಸ್ಟ್ ೩ ರಿಂದಲೇ ಮಳೆ ರಭಸ ಜಾಸ್ತಿಯಾದುದು ಕಂಡು ನದಿ ತೀರದ ವಾಸಿಗಳಲ್ಲಿ ಮತ್ತೆ ಅದೇ ಆಗಸ್ಟ್ ತಿಂಗಳ ಆಶ್ಲೇಷಾ ಮಳೆಯ ಆತಂಕ ಮನೆ ಮಾಡಿದೆ.
ಮಳೆ ಎಡಬಿಡದೇ ಸುರಿಯುತ್ತಿದ್ದು ನದಿಯ ನೀರಿನ ಮಟ್ಟ ಮತ್ತೆ ದಿನೇ ದಿನೇ ಏರಿಕೆಯಾಗತೊಡಗಿದೆ. ಕಳೆದ ೨೦೧೭ ರಿಂದ ಮಳೆಗಾಲದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಇಡೀ ಕೊಡಗು ಜಿಲ್ಲೆಯ ಜನರ ಜೀವನವನ್ನು ತಲ್ಲಣಗೊಳಿಸುತ್ತಲೇ ಇದೆ. ಈ ಬಾರಿ ಜುಲೈನಲ್ಲಿ ಚುರುಕಾದ ಮಳೆಯಿಂದ ನದಿಯ ನೀರಿನ ಮಟ್ಟ ಏರಿಕೆಯಾಗತೊಡಗಿತ್ತು.
ಆದರೆ ಈಗ ಆಗಸ್ಟ್ ಮೊದಲ ವಾರದಲ್ಲಿ ಸುರಿಯತೊಡಗಿರುವ ಮಳೆ ನದಿ ದಂಡೆಯ ನಿವಾಸಿಗಳಲ್ಲಿ ಅದೇ ಹಿಂದಿನ ವರ್ಷಗಳಲ್ಲಿ ಮಾಡಿ ಹೋದಂತಹ ದುಗುಡ ದುಮ್ಮಾನಗಳನ್ನು ಮತ್ತೆ ಮೂಡಿಸ ಹೊರಟಿದೆ. ಕಳೆದ ಮೂರು ವರ್ಷಗಳಿಂದ ಆಗಸ್ಟ್ ತಿಂಗಳಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಸೃಷ್ಟಿಯಾಗಿ ಜನರ ನೆಮ್ಮದಿಗೆ ಭಂಗ ತಂದಿತ್ತು.
೨೦೧೮ರಲ್ಲಿ ಆಗಸ್ಟ್ ೧೩ ರಿಂದ ಶುರುವಾದ ವರುಣನ ಅಬ್ಬರ ಆಗಸ್ಟ್ ೧೫ರ ಸಂಭ್ರಮದ ದಿನದ ಸಡಗರಕ್ಕು ಕುತ್ತು ತಂದಿತ್ತು. ಅದೇ ವರ್ಷದ ಅಗಸ್ಟ್ ೧೭ ರವರೆಗೂ ಮುಂದುವರೆದಿದ್ದ ಮಳೆಗೆ ಕುಶಾಲನಗರ ಮುಳ್ಳುಸೋಗೆ ಭಾಗದ ನದಿ ತೀರದ ನೂರಾರು ಮನೆಗಳಿಗೆ ಪ್ರವಾಹ ಸ್ಥಿತಿ ನಿರ್ಮಾಣಗೊಂಡು ಇಲ್ಲಿನ ಅಷ್ಟೂ ಜನರ ನೆಮ್ಮದಿ ನಿರ್ನಾಮವಾಗಿತ್ತು. ೨೦೧೯ರಲ್ಲಿ ಆ ೭ ರಿಂದಲೇ ಶುರುವಾಗಿದ್ದ ಭಾರೀ ಮಳೆ ಆಗಸ್ಟ್ ೧೩ರ ತನಕವೂ ಅಬ್ಬರಿಸಿತ್ತು.
ಹಾಗೆಯೇ ೨೦೨೧ ರಲ್ಲೂ ಅದೇ ಆಗಸ್ಟ್ನಲ್ಲಿ ಮಳೆಯ ಆತಂಕ ಎಂದಿನAತೆಯೇ ಮುಂದುವರೆದಿತ್ತಾದರೂ ಅಷ್ಟಾಗಿ ಹಾನಿ ಮಾಡಿರಲಿಲ್ಲ. ಆದರೆ ಈ ಬಾರಿ ಅದೇ ಆಗಸ್ಟ್ನಲ್ಲೇ ಸುರಿಯುತ್ತಿರುವ ಮಳೆ ಜನರ ಬದುಕನ್ನು ಘಾಸಿ ಮಾಡುತ್ತಿದೆ. ಹಾಗಾಗಿ ಕುಶಾಲನಗರ ಭಾಗದ ಬಹುತೇಕ ನದಿ ತೀರದ ವಾಸಿಗಳಲ್ಲಿ ಆಶ್ಲೇಷಾ ಮಳೆ ನಿದ್ರೆ ಹಾಗೂ ನೆಮ್ಮದಿ ಎರಡನ್ನು ಕಸಿದಿದೆ. - ಕೆ.ಎಸ್. ಮೂರ್ತಿ