ಮಡಿಕೇರಿ, ಆ. ೧೦: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ನಡುವೆಯೂ ಇಲ್ಲಿನ ಮಹಿಳೆಯರು ಮಳೆಗಾಲದ ಖಾದ್ಯಗಳನ್ನು ತಯಾರಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಸಂಭ್ರಮಿಸಿದರು.

ಕೊಡಗು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಇಲ್ಲಿನ ಗೌಡ ಸಮಾಜದಲ್ಲಿ ಮಂಗಳವಾರ ಆಯೋಜಿಸಿದ್ದ ‘ಆಟಿಹಬ್ಬ’ವು ಗಮನ ಸೆಳೆಯಿತು. ಮಹಿಳೆಯರು ನೂರಾರು ತಿನಿಸುಗಳನ್ನು ಸ್ವಯಂ ತಯಾರಿಸಿ, ಪ್ರದರ್ಶನಕ್ಕೆ ಇಟ್ಟಿದ್ದರು. ಜತೆಗೆ, ಅವುಗಳನ್ನು ತಾವೇ ಹಂಚಿಕೊAಡು ಸೇವಿಸುವ ಮೂಲಕ ಸಹಭೋಜನ ಮಾಡಿ ಸೌಹಾರ್ದತೆ ಮೆರೆದರು.

ಇದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮಹಿಳೆಯರು ತಮ್ಮ ನಿತ್ಯದ ಜಂಜಾಟವನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮರೆತರು. ಹಾಡು, ಗಾಯನ ಸೇರಿದಂತೆ ಅನೇಕ ಬಗೆಯ ಕಾರ್ಯಕ್ರಮಗಳು ಆಟಿಹಬ್ಬಕ್ಕೆ ಮೆರುಗು ತಂದವು.

ಕಾಡು ಕಲ್ಲೋಟೆ ಕಾಯಿ, ಕಾಡು ಮಾವಿನ ಹಣ್ಣಿನ ಸಾಂಬರ್, ರವೆಯ ಕಾಡು ಕೆಸದ ಪತ್ರೊಡೆ, ಚಗತೆ ಸೊಪ್ಪಿನ ಪಲ್ಯ, ಆಟಿ ಸೊಪ್ಪಿನ ಹಲ್ವ, ಕೈಹುಳಿ ಚಟ್ನಿ, ಗಿಣಿಕೆ ಸೊಪ್ಪಿನ ಪಲ್ಯ, ಬಾಳೆ ದಿಂಡಿನ ಪಲ್ಯ, ಕಣಿಲೆ ಉಪ್ಪಿನಕಾಯಿ, ಓಡುರೊಟ್ಟಿ, ಕಣಿಲೆ ಪಲ್ಯ, ಕಣಿಲೆ ಸಾರು, ಹಲಸಿನ ಹಣ್ಣಿನ ಕೂಗಲೆ ಹಿಟ್ಟು, ಹಲಸಿನಕಾಯಿ ಚಿಪ್ಸ್, ಹಲಸಿನ ಹಣ್ಣಿನ ಕಜ್ಜಾಯ, ಕರಿ ಕೆಸದ ಎಲೆಯ ಪತ್ರೊಡೆ, ಆಟಿ ಸೊಪ್ಪಿನ ಕಾಫಿ, ಮೈದಾ ಕಜ್ಜಾಯ, ಬಾಳೆಹಣ್ಣಿನ ಕೂಗಲಿಟ್ಟು, ಕಡುಬು, ಆಟಿಸೊಪ್ಪಿನ ಪಲ್ಯ ಹೀಗೆ ಇನ್ನೂ ಹಲವು ಹತ್ತು ಬಗೆಯ ರಸಗವಳಗಳು ಅಲ್ಲಿದ್ದವು.

ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಪ್ರೇಮಾ ರಾಘವಯ್ಯ ಪ್ರಾರ್ಥನೆ ಮಾಡಿದರು. ಉಪಾಧ್ಯಕ್ಷೆ ಬೈತಡ್ಕ ಜಾನಕಿ ಬೆಳ್ಳಿಯಪ್ಪ, ದಮಯಂತಿ, ಇಂದಿರಾ, ಸೇರಿದಂತೆ ೧೦೦ಕ್ಕೂ ಅಧಿಕ ಮಂದಿ ಮಹಿಳೆಯರು ಭಾಗವಹಿಸಿದ್ದರು.