ಮಡಿಕೇರಿ, ಆ. ೧೧: ಶ್ರೀಮಂಗಲ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಕಳೆದ ಒಂದು ವಾರಕ್ಕೂ ಅಧಿಕ ದಿನದಿಂದ ನಿರಂತರವಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಈ ವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆಗಳು ಉಂಟಾಗಿದ್ದು, ನಿರಂತರವಾಗಿ ವಿದ್ಯುತ್ ಕಡಿತಗೊಳ್ಳುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ದೂರು ಕೇಳಿಬಂದಿದೆ.
ದಕ್ಷಿಣ ಕೊಡಗಿನ ಗಡಿ ಭಾಗ ಇದಾಗಿದ್ದು, ಉಪಕೇಂದ್ರದ ವ್ಯಾಪ್ತಿ ಹೆಚ್ಚಿದೆ. ತೀವ್ರ ಮಳೆ-ಗಾಳಿಯ ಪರಿಣಾಮದಿಂದಲೂ ವಿದ್ಯುತ್ ಸಮಸ್ಯೆ ಎದುರಾಗಿದೆ. ಅಲ್ಲಲ್ಲಿ ಮರ ಬಿದ್ದು ಹಾನಿಯಾಗಿರುವುದು, ಕಂಬ, ವಯರ್ಗಳು ಜಖಂ ಗೊಂಡಿರುವುದನ್ನು ಸರಿಪಡಿಸುವುದು ದುಸ್ತರವಾಗಿದೆ. ಕೆಲವೆಡೆ ಪ್ರವಾಹವೂ ಎದುರಾಗಿದ್ದು, ಸಮಸ್ಯೆ ಸರಿಪಡಿಸಲು ಕಾಲಾವಕಾಶ ಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಇದರ ನಡುವೆ ವಿದ್ಯುತ್ ಕೇಂದ್ರದಲ್ಲೂ ತಾಂತ್ರಿಕ ದೋಷ ಉಂಟಾಗಿರುವುದು ಮತ್ತೊಂದು ಕಾರಣವಾಗಿದೆ ಎಂದು ಸೆಸ್ಕ್ನ ಕಾರ್ಯಪಾಲಕ ಅಭಿಯಂತರರಾದ ಅನಿತಾ ಬಾಯಿ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
ಕೇಂದ್ರದಲ್ಲಿ ಹಳೆಯ ಕಾಲದ್ದಾಗಿರುವ ಬ್ರೇರ್ಸ್ ತಾಂತ್ರಿಕ ತೊಂದರೆಗೊಳಗಾಗಿದೆ. ಇದನ್ನು ಸರಿಪಡಿಸಲು ತಜ್ಞರು ಬೆಂಗಳೂರು ಅಥವಾ ಚೆನ್ನೆöÊಯಿಂದ ಬರಬೇಕಾಗಿದೆ. ಇದರೊಂದಿಗೆ ಶ್ರೀಮಂಗಲ ವಿಭಾಗ ದೊಡ್ಡದಾಗಿರುವುದರಿಂದ ಅಗತ್ಯ ಸಿಬ್ಬಂದಿಗಳ ಕೊರತೆಯೂ ಇರುವುದಾಗಿ ಅವರು ಹೇಳಿದ್ದಾರೆ.
ಹೆಚ್ಚಿನ ಸಿಬ್ಬಂದಿಗಳನ್ನು ಒದಗಿಸಲು ಈಗಾಗಲೇ ಉನ್ನತಾಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ಹೊಸದಾಗಿ ಇಲಾಖೆಗೆ ಆಯ್ಕೆಯಾದವರು ಇನ್ನೂ ವರದಿ ಮಾಡಿಕೊಂಡಿಲ್ಲ. ನೂತನ ಸಿಬ್ಬಂದಿಗಳನ್ನು ತ್ವರಿತವಾಗಿ ಆಯ್ಕೆ ಮಾಡಿ ಕಳುಹಿಸಲು ಕೋರಲಾಗಿದೆ. ಶ್ರೀಮಂಗಲ ಹಾಗೂ ಗೋಣಿಕೊಪ್ಪಲು ವಿಭಾಗಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಅನಿತಾ ಬಾಯಿ ಅವರು ತಿಳಿಸಿದ್ದಾರೆ.
ಕೇಂದ್ರದಲ್ಲಿ ಈ ತನಕ ಜೂನಿಯರ್ ಇಂಜಿನಿಯರ್ ಕೂಡ ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ನೂತನವಾಗಿ ಜೂನಿಯರ್ ಇಂಜಿನಿಯರ್ (ಜೆ.ಇ.) ನೇಮಕ ಮಾಡಲಾಗಿದ್ದು, ಇಂದು ವರದಿ ಮಾಡಿಕೊಳ್ಳುತ್ತಿದ್ದಾರೆ. ಇರುವ ಸಿಬ್ಬಂದಿಗಳು ಸಾಧ್ಯವಾದಷ್ಟು ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ಗ್ರಾಹಕರಿಂದಲೂ ಸಹಕಾರ ಅಗತ್ಯವಿರುವುದಾಗಿ ಅವರು ಹೇಳಿದ್ದು, ವಿದ್ಯುತ್ ವ್ಯತ್ಯಯವನ್ನು ತ್ವರಿತವಾಗಿ ಸರಿಪಡಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರತಿನಿಧಿಗಳ ವಿರುದ್ಧವೂ ಸಾರ್ವಜನಿಕರ ಆಕ್ರೋಶ ವ್ಯಕ್ತಗೊಳ್ಳುತ್ತಿರುವುದು ಕಂಡುಬAದಿದೆ.