ಮಡಿಕೇರಿ, ಆ. ೧೧: ತಿತಿಮತಿ - ನೊಕ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ನಿರಂತರ ಹಾವಳಿಯಿಂದಾಗಿ ರೈತಾಪಿ ವರ್ಗ ಪರಿತಪಿಸುವಂತಾಗಿದೆ. ಈ ಕಾರಣದಿಂದಾಗಿಯೇ ಸಮೃದ್ಧವಾಗಿ ಬೆಳೆಯಲಾಗುತ್ತಿದ್ದ ಭತ್ತದ ಕೃಷಿಯನ್ನು ಕೈಬಿಡುವಂತಾಗಿದೆ. ಸುಮಾರು ೩೦ ಸಾವಿರ ಎಕರೆ ಭತ್ತದ ಗದ್ದೆಗಳು ಪಾಳುಬಿದ್ದಂತಾಗಿದೆ. ಇಷ್ಟು ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತಿದ್ದ ಪ್ರದೇಶದಲ್ಲಿ ಇದೀಗ ಕೇವಲ ನಾಲ್ಕು ಪ್ರದೇಶದಲ್ಲಿ ಮಾತ್ರ ರೈತರು ಭತ್ತದ ಕೃಷಿ ಮಾಡುತ್ತಿದ್ದಾರೆ.
ಇಲ್ಲಿ ಶ್ರೀ ಬಸವೇಶ್ವರ ದೇವಸ್ಥಾನವಿದ್ದು, ಹುತ್ತರಿ ಹಬ್ಬಕ್ಕೆ ಭತ್ತದ ತೆನೆ ದೇವರಿಗೆ ಅರ್ಪಿಸುವ ವಾಡಿಕೆಯಿದ್ದು, ಅದು ಕೂಡ ನಿಂತು ಹೋಗಿದೆ. ಶ್ರೀ ಕೃಷ್ಣ ಬಲರಾಮ ದೇವಸ್ಥಾನವಿದ್ದು, ಕಳೆದ ೬೦ ವರ್ಷಗಳಿಂದ ಹುತ್ತರಿ ಹಬ್ಬ ಆಚರಿಸುತ್ತಿದ್ದ ದೇವರಿಗೆ ಧಾನ್ಯ ಅರ್ಪಿಸುವ ವಾಡಿಕೆ ಇದೆ. ಆನೆಗಳ ನಿರಂತರ ಹಾವಳಿಯಿಂದ ಇಲ್ಲಿ ಕೂಡ ಈ ವರ್ಷ ಇದು ಅಂತಿಮವಾಗುವ ಮುನ್ಸೂಚನೆ ಕಾಣುತ್ತಿದೆ.
ಕಳೆದ ೪ ವರ್ಷಗಳ ಹಿಂದೆ ಚಾಮುಂಡಿಕಟ್ಟೆಯಿAದ ಜಯಪುರ ಎಸ್ಟೇಟ್ ಮಾರ್ಗವಾಗಿ ಕೂಂಜರಾಮನಕಟ್ಟೆಯ ಮೂಲಕ ಜಂಗಲಾಡಿಯವರೆಗೆ ರೈಲ್ವೆ ಬ್ಯಾರಿಕೇಡ್ ಕಂಬಿ ಅಳವಡಿಸಲಾಗಿತ್ತು. ಅದು ತೀರಾ ಕಳಪೆ ಕಾಮಗಾರಿ ಎಂದು ವರದಿಯಾಗಿದೆ. ಜಂಗಲಾಡಿಯಲ್ಲಿ ಒಂದು ಗೇಟು ಅಳವಡಿಸಲಾಗಿದ್ದು, ಅದನ್ನು ಹಾಕುವುದು ಮತ್ತು ತೆಗೆಯುವುದು ಅರಣ್ಯ ಇಲಾಖೆಯ ಕರ್ತವ್ಯವಾಗಿದೆ. ಆದರೆ ಈ ಕಾರ್ಯವನ್ನು ಸಾರ್ವಜನಿಕರೆ ಮಾಡಬೇಕೆಂದು ಅರಣ್ಯ ಇಲಾಖೆಯವರ ಬಯಕೆ.
ಜಂಗಲಾಡಿಯಿAದ ಕೋಣನಕಟ್ಟೆವರೆಗೆ ೧ ಕಿ.ಮೀ. ಅಂತರ ಇದ್ದು, ಜಂಗಲಾಡಿಯಿAದ ಕೋಣನಕಟ್ಟೆವರೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಿದ್ದಲ್ಲಿ ಈ ಭಾಗದಲ್ಲಿ ಆನೆ ಮತ್ತು ಮಾನವ ಸಂಘರ್ಷ ಬಹುತೇಕ ಕಡಿಮೆಯಾಗಲಿದೆ. ಏಕೆಂದರೆ ಇದೇ ಮಾರ್ಗದಲ್ಲಿ ಆನೆಗಳು ನೊಕ್ಯ, ಮಾಯಮುಡಿ, ಭದ್ರಕೊಳ, ಗೋಣಿಕೊಪ್ಪಲು ಹಾಗೂ ದಕ್ಷಿಣ ಕೊಡಗಿನ ಇತರ ಭಾಗಕ್ಕೆ ಸಂಚರಿಸುತ್ತಿವೆ.
ಜAಗಲಾಡಿಯಲ್ಲಿನ ಕಾಮಗಾರಿ ನಿಂತು ಹೋಗಿದೆ. ಅಲ್ಲಿ ಸ್ವಲ್ಪ ಜನ ವಾಸವಿದ್ದು, ಅವರಿಗೆ ಬೇಕಾದ ರೀತಿಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಿದರೆ, ಆನೆಯ ಹಾವಳಿ ತಡೆಯಬಹುದು. ಆದರೆ ಚುನಾಯಿತ ಪ್ರತಿನಿಧಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಇದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದಲ್ಲಿ ಆನೆಗಳ ಹಾವಳಿಯಿಂದ ಈಗಾಗಲೇ ಸಾವು - ನೋವುಗಳು ನಿರಂತರವಾಗಿ ಘಟಿಸುತ್ತಿದ್ದು, ಚುನಾಯಿತ ಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಪರಿಸರವಾದಿಗಳು ಸಮಸ್ಯೆಯ ತೀವ್ರತೆ ಅರಿಯುತ್ತಿಲ್ಲ.
ಅರಣ್ಯ ಸಚಿವÀ ಉಮೇಶ್ ಕತ್ತಿ ಅವರು, ಈ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಅಭಯ ನೀಡಿದ್ದರು. ಆದರೆ, ಅವರು ಕೊಡಗು ಜಿಲ್ಲಾ ಪ್ರವಾಸದಲ್ಲಿದ್ದಾಗ ಈ ಸ್ಥಳಕ್ಕೆ ಭೇಟಿ ನೀಡಿರುವುದು ಈ ಭಾಗದ ರೈತರು ಮತ್ತು ಕಾರ್ಮಿಕರಿಗೆ ನಿರಾಶೆ ತಂದಿದೆ. ಈಗಾಗಲೇ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಸಮಸ್ಯೆ ಪರಿಹಾರಕ್ಕೆ ಹೋರಾಟ ಮಾಡಿದ್ದರೂ ಫಲ ಇಲ್ಲದಂತಾಗಿದೆ. ಈ ಭಾಗದ ರೈತರು, ಬೆಳೆಗಾರರು, ಕಾರ್ಮಿಕರು ಹಾಗೂ ಸಾರ್ವಜನಿಕರು ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ತಕ್ಕ ಪಾಠ ಕಲಿಸಲು ಚಿಂತನೆ ನಡೆಸಿದ್ದಾರೆ.
ವಲಸೆ ಹೋಗುವ ನಿರ್ಧಾರ
ಆನೆಗಳ ನಿರಂತರ ಹಾವಳಿಯಿಂದ ಕಿತ್ತಳೆ, ಕಾಳುಮೆಣಸು ಹಾಗೂ ಭತ್ತದ ಬೆಳೆ ಇಲ್ಲದ ಕಾರಣ ಜನರು ವಲಸೆ ಹೋಗುವ ಕುರಿತು ಚರ್ಚಿಸುವಂತಾಗಿದೆ. ಇದರಿಂದ ಅರಣ್ಯ ಅಧಿಕಾರಿಗಳ ವೆಚ್ಚ ಅಂದರೆ ಟಿಎ, ಡಿಎ, ಸಂಬಳ ಹಾಗೂ ಅವರ ವಾಹನಗಳ ಓಡಾಟಕ್ಕೆ ತಗಲುವ ವೆಚ್ಚ ಉಳಿತಾಯವಾಗಿ ಸರ್ಕಾರಕ್ಕೆ ಲಾಭವಾಗುತ್ತದೆ. ೨ ವರ್ಷಗಳ ಹಿಂದೆ ಕೊರೊನಾ ಬಂದಾಗ ಕೈಯಲ್ಲಿ ಹಣವಿದ್ದರೂ ಕೂಡ ದಿನಿತ್ಯ ಜೀವನಕ್ಕೆ ಬೇಕಾದ ಅಕ್ಕಿ ಮತ್ತು ತರಕಾರಿ ಖರಿದಿಸಲು ಪರದಾಡುವಂತಾಗಿತ್ತು. ಈಗ ಆನೆಗಳ ಕಾಟದಿಂದ ರೈತ ಬೆಳೆದ ಬೆಳೆ ಕೈಗೆ ಸಿಗದೆ ಪರಿತಪಿಸುವಂತಾಗಿದೆ.
ಆನೆ ಮತ್ತು ಮಂಗಗಳ ಕಾಟ, ಅರಣ್ಯ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೆ ಇರುವುದು, ತಾಲೂಕು ಕಚೇರಿಗಳಲ್ಲಿ ಕಂದಾಯ ಅಧಿಕಾರಿಗಳ ಧೋರಣೆ, ಕಾರ್ಮಿಕರ ಅಲಭ್ಯತೆ, ರಸಗೊಬ್ಬರದ ಮೇಲೆ ಏರಿಕೆ ಬರೆ ಹಾಗೂ ವಾತಾವರಣದಲ್ಲಿ ಅತೀವ ಬದಲಾವಣೆ ಇದೆಲ್ಲವನ್ನು ಮೀರಿ ರೈತರು ಬದುಕುವುದು ತುಂಬಾ ಕಷ್ಟಸಾಧ್ಯವಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಬೇಸತ್ತಿರುವ ರೈತ ತನ್ನ ಮುಂದಿನ ಪೀಳಿಗೆಗೆ ಕೃಷಿಯ ಬಗ್ಗೆ ಒಳ್ಳೆಯ ಸಂದೇಶ ಕೊಡುವುದು ಕಷ್ಟಕರವಾಗಿದೆ.
ಇನ್ನಾದರೂ ಸಮಸ್ಯೆಯ ತೀವ್ರತೆ ಅರಿತು ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು, ಪರಿಸರವಾದಿಗಳು ಇದರ ಪರಿಹಾರಕ್ಕೆ ಗಮನ ಹರಿಸಬೇಕು ಎಂಬದು ಜನತೆಯ ಆಗ್ರಹವಾಗಿದೆ ಎನ್ನುತ್ತಾರೆ ಸ್ಥಳೀಯ ರೈತರಾದ ಸಿ.ಎ. ಕಾರ್ಯಪ್ಪ ಅವರು.