ಮಡಿಕೇರಿ, ಆ. ೧೦: ಪ್ರಸಕ್ತ ವರ್ಷ ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸರಾಸರಿ ೧೦೦ ಇಂಚು ಗಡಿ ದಾಟಿದಂತಾಗಿದ್ದು ಮತ್ತೂ ಮುಂದುವರಿಯುತ್ತಿದೆ. ಇದು ಕೇವಲ ಜಿಲ್ಲಾ ಸರಾಸರಿಯಾದರೆ, ಗ್ರಾಮೀಣ ಭಾಗಗಳು ಸೇರಿದಂತೆ ಹೆಚ್ಚು ಮಳೆಯಾಗುವ ಇನ್ನಿತರ ಪ್ರದೇಶಗಳಲ್ಲಿ ಇದು ಎರಡು ಪಟ್ಟು ಹೆಚ್ಚಾಗಿದೆ. ಈಗಾಗಲೇ ಗಡಿಭಾಗ ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಸುಮಾರು ೨೦೦ ಇಂಚುಗಳ ದಾಖಲೆಯ ಪ್ರಮಾಣದ ಮಳೆಯಾಗಿದೆ. ತಲಕಾವೇರಿ, ಭಾಗಮಂಡಲ ವಿಭಾಗ, ಶಾಂತಳ್ಳಿ, ಶ್ರೀಮಂಗಲ, ಬಿರುನಾಣಿ, ಬಿ.ಶೆಟ್ಟಿಗೇರಿ, ನಾಲ್ಕುನಾಡು ವಿಭಾಗದಲ್ಲಿಯೂ ಭಾರೀ ಪ್ರಮಾಣದ ಮಳೆಯಾಗಿದೆ. ಈ ವಿಭಾಗಗಳಲ್ಲಿ ಈಗಾಗಲೇ ೧೨೦ ರಿಂದ ೧೫೦ ಇಂಚಿಗೂ ಅಧಿಕ ಮಳೆಯಾಗಿದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಇದೀಗ ಒಂದಷ್ಟು ಇಳಿಮುಖಗೊಳ್ಳುತ್ತಿದ್ದರೂ ಮತ್ತೆ ಯಾವಾಗ ರಭಸ ಹೆಚ್ಚಾಗಲಿದೆ ಎಂಬ ಆತಂಕ ಇನ್ನೂ ದೂರಾಗಿಲ್ಲ. ಈ ತನಕದ ಮಳೆ-ಗಾಳಿಯ ತೀವ್ರತೆಯಿಂದಾಗಿ ಜಿಲ್ಲೆಯಾದ್ಯಂತ ವ್ಯಾಪಕ ಹಾನಿಗಳು ಉಂಟಾಗಿವೆ. ಆಗಿರುವ ಅಪಾಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಹಾಗೂ ಇನ್ನಷ್ಟು ತೊಂದರೆಯಾಗದAತೆ ಸಮರೋಪಾದಿಯಲ್ಲಿ ವಿವಿಧ ಇಲಾಖೆಗಳ ಮೂಲಕ ಕಾರ್ಯಾಚರಣೆ ಮುಂದುವರಿಯುತ್ತಿದೆ. ಮಳೆಯ ಸನ್ನಿವೇಶ ಮತ್ತೂ ಹೆಚ್ಚಿರುವುದರಿಂದ ಹಲವು ಕೆಲಸ ಕಾರ್ಯಗಳಿಗೆ ಅಡಚಣೆಯೂ ಆಗುತ್ತಿದೆ. ಅಪಾಯದಂಚಿನಲ್ಲಿರುವ ಮಂಗಳೂರು ರಸ್ತೆಯ ಮದೆ ವ್ಯಾಪ್ತಿ, ನಾಪೋಕ್ಲು-ಬೆಟ್ಟಗೇರಿ, ಕರಿಕೆ ಮಾರ್ಗದಲ್ಲಿನ ಆತಂಕದ ಪರಿಸ್ಥಿತಿ ಅದೇ ರೀತಿಯಲ್ಲಿದ್ದು ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ.

ಕಳೆದ ಬಾರಿಗಿಂತ ೨೫ ಇಂಚು ಅಧಿಕ

ಪ್ರಸಕ್ತ ಸಾಲಿನ ಜನವರಿಯಿಂದ ಈತನಕ ಜಿಲ್ಲೆಯ ಸರಾಸರಿ ೧೦೧.೨೦ ಇಂಚಿನಷ್ಟು ಮಳೆಯಾಗಿದ್ದು ಇದೀಗ ಶತಕದ ಗಡಿದಾಟಿದೆ. ಕಳೆದ ವರ್ಷ ಈ ಅವಧಿಯಲ್ಲಿ ೭೫.೬೪ ಇಂಚು ಮಳೆಯಾಗಿದ್ದು ಈ ಬಾರಿ ಕಳೆದ ಸಾಲಿಗಿಂತ ೨೫ ಇಂಚಿಗೂ ಅಧಿಕ ಮಳೆ ಬಿದ್ದಂತಾಗಿವೆ. ಮಡಿಕೇರಿ ತಾಲೂಕಿಗೆ ಅತಿಹೆಚ್ಚು ಮಳೆಯಾಗಿದೆ. ಕಳೆದ ಸಾಲಿನಲ್ಲಿ ಜನವರಿಯಿಂದ ಈತನಕ ಮಡಿಕೇರಿ ತಾಲೂಕಿಗೆ ೧೦೪.೫೦ ಇಂಚು ಮಳೆಯಾಗಿದ್ದರೆ ಈ ಬಾರಿ ೧೪೫ ಇಂಚಿನಷ್ಟಾಗಿದ್ದು ೪೦ ಇಂಚು ಅಧಿಕವಾಗಿದೆ.

ವೀರಾಜಪೇಟೆ ತಾಲೂಕಿನಲ್ಲಿ ೭೭.೫೨ ಇಂಚು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ೬೦.೫೭ ಇಂಚಿನಷ್ಟಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿಯೂ ಈ ಬಾರಿ ಕಳೆದ ವರ್ಷಕ್ಕಿಂತ ಅಧಿಕ ಮಳೆಯಾಗಿದೆ. ತಾಲೂಕಿನಲ್ಲಿ ಕಳೆದ ಬಾರಿ ೬೧.೮೪ ಇಂಚು ಮಳೆಯಾಗಿದ್ದರೆ ಈ ಬಾರಿ ೮೦.೯೬ ಇಂಚಿನಷ್ಟಾಗಿದ್ದು ಸುಮಾರು ೨೦ ಇಂಚು ಅಧಿಕವಾಗಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೧.೭೮ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧.೭೦, ವೀರಾಜಪೇಟೆ ೧.೭೨, ಸೋಮವಾರಪೇಟೆ ೧.೭೫ ಇಂಚು ಮಳೆಯಾಗಿದೆ. ಶ್ರೀಮಂಗಲ ಹೋಬಳಿಯಲ್ಲಿ ೪ ಇಂಚು, ಪೊನ್ನಂಪೇಟೆ ೩, ಭಾಗಮಂಡಲ ೨.೯೦, ಶಾಂತಳ್ಳಿ ೫.೦೮ ಇಂಚು ಅಧಿಕ ಮಳೆಯಾಗಿದೆ. ಉಳಿದಂತೆ ಮಡಿಕೇರಿ ೧.೪೦, ನಾಪೋಕ್ಲು ೨.೧೦, ಹುದಿಕೇರಿ ೨.೧೯, ಸೋಮವಾರಪೇಟೆ ೧.೪೯, ಶನಿವಾರಸಂತೆ ೨.೧೦, ಕೊಡ್ಲಿಪೇಟೆ ೨.೧೫ ಇಂಚು ಮಳೆ ಕಳೆದ ೨೪ ಗಂಟೆಗಳಲ್ಲಾಗಿದೆ. ಉಳಿದೆಡೆ ಮಳೆ ತುಸು ಇಳಿಮುಖವಾಗಿದೆ.

ಶನಿವಾರಸಂತೆ : ಶನಿವಾರಸಂತೆ ಹೋಬಳಿಯ ದೊಡ್ಡ ಮಳ್ತೆ ಪಂಚಾಯಿತಿ ವ್ಯಾಪ್ತಿಯ ಹೊನ್ನವಳ್ಳಿ ಗ್ರಾಮದ ಗಂಗಾಧರ ಅವರ ವಾಸದ ಮನೆ ಮೇಲೆ ಮಂಗಳವಾರ ರಾತ್ರಿ ಭಾರೀ ಗಾತ್ರದ ಸಿಲ್ವರ್ ಮರ ಬಿದ್ದು, ಮನೆಯ ಮೇಲ್ಚಾವಣಿ ಸಂಪೂರ್ಣ ಹಾನಿಯಾಗಿದೆ. ಕುಟುಂಬದವರನ್ನು ರಾತ್ರಿ ಪಕ್ಕದ ಮನೆಗೆ ಸ್ಥಳಾಂತರ ಮಾಡಲಾಗಿತ್ತು. ಇಂದು ಆಹಾರ ವಿತರಣೆ ಮಾಡಲಾಗಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ಬಿ.ಆರ್. ಮಂಜುನಾಥ್, ಗ್ರಾಮ ಲೆಕ್ಕಿಗ ಅಬ್ದುಲ್ ರಜಾಕ್ ಹಾಗೂ ಗ್ರಾಮ ಸಹಾಯಕ ಯೋಗೇಶ್ ಭೇಟಿ ನೀಡಿದ್ದಾರೆ.ಬೆಟ್ಟಗೇರಿ ಗ್ರಾಮ ಪಂಚಾಯಿತಿ, ಹೆರವನಾಡು ಗ್ರಾಮದ ಉಡೋತ್‌ಮೊಟ್ಟೆಯಲ್ಲಿ ಸುರಿದ ಮಳೆಯಿಂದಾಗಿ ಪವಿ ಅವರಿಗೆ ಸೇರಿದ ಮನೆಯ ಹಿಂಭಾಗದಲ್ಲಿ ಬರೆ ಕುಸಿತವಾಗಿ ನಷ್ಟವಾಗಿದೆ. ಸ್ಥಳಕ್ಕೆ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ನಾಪಂಡ ರ‍್ಯಾಲಿ ಮಾದಯ್ಯ, ಸದಸ್ಯರಾದ ಗೋಪಾಲ ಪೂಜಾರಿ, ಉಡೋತ್ ಮುತ್ತಪ್ಪ, ಪಿಡಿಓ ಉದಯ ಹಾಗೂ ಗ್ರಾಮಲೆಕ್ಕಿಗ ಮಹಾನಂದ ಅವರು ಪರಿಶೀಲಿಸಿದರು.ಸೋಮವಾರಪೇಟೆ: ಪ್ರಸಕ್ತ ವರ್ಷದ ಭಾರೀ ಮಳೆಗೆ ಹರಪಳ್ಳಿ ಗ್ರಾಮದಲ್ಲಿ ಭೂ ಕುಸಿತ ಸಂಭವಿಸಿದ್ದು ವಾಸದ ಮನೆಗೆ ಅಪಾಯ ತಂದೊಡ್ಡಿದೆ. ಹರಪಳ್ಳಿ ಗ್ರಾಮದ ಸೋಮಯ್ಯ ಅವರ ಮನೆಯ ಸಮೀಪವಿರುವ ಲಿಂಗರಾಜು ಅವರಿಗೆ ಸೇರಿದ ಜಾಗ ಸುಮಾರು ೧ ಎಕರೆಯಷ್ಟು ಕುಸಿತವಾಗಿದೆ.

ಸೋಮವಾರಪೇಟೆ: ಪ್ರಸಕ್ತ ವರ್ಷದ ಭಾರೀ ಮಳೆಗೆ ಹರಪಳ್ಳಿ ಗ್ರಾಮದಲ್ಲಿ ಭೂ ಕುಸಿತ ಸಂಭವಿಸಿದ್ದು ವಾಸದ ಮನೆಗೆ ಅಪಾಯ ತಂದೊಡ್ಡಿದೆ. ಹರಪಳ್ಳಿ ಗ್ರಾಮದ ಸೋಮಯ್ಯ ಅವರ ಮನೆಯ ಸಮೀಪವಿರುವ ಲಿಂಗರಾಜು ಅವರಿಗೆ ಸೇರಿದ ಜಾಗ ಸುಮಾರು ೧ ಎಕರೆಯಷ್ಟು ಕುಸಿತವಾಗಿದೆ.

ನಿನ್ನೆ ಅಲ್ಪ ಪ್ರಮಾಣದಲ್ಲಿ ಬರೆ ಕುಸಿದಿದ್ದು, ಇಂದು ಸುಮಾರು ೩೦೦ ಮೀಟರ್‌ನಷ್ಟು ದೂರಕ್ಕೆ ೫೦ ಅಡಿ ಆಳಕ್ಕೆ ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ಕೆಳಭಾಗದಲ್ಲಿದ್ದ ಜಲಾ ಹೂವಯ್ಯ ಅವರಿಗೆ ಸೇರಿದ ಗದ್ದೆ ಮಣ್ಣಿನಡಿ ಮುಚ್ಚಿ ಹೋಗಿದೆ. ಭೂ ಕುಸಿತ ಸಂಭವಿಸಿರುವ ಪ್ರದೇಶದಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಇನ್ನಷ್ಟು ಕುಸಿಯುವ ಸಂಭವವಿದೆ. ಇದೀಗ ಕುಸಿತವಾಗಿರುವ ಪ್ರದೇಶದಿಂದ ೩೦ ಅಡಿ ಅಂತರದಲ್ಲಿ ಸೋಮಯ್ಯ ಅವರ ವಾಸದ ಮನೆ ಇದ್ದು, ಈ ಮನೆಗೆ ಅಪಾಯ ಎದುರಾಗಿದೆ.

ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಗ್ರಾಮ ಲೆಕ್ಕಿಗ ಕರಿಬಸವರಾಜು, ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮಯ್ಯ ಅವರ ಮನೆಗೆ ಅಪಾಯ ಎದುರಾಗಿರುವುದರಿಂದ ಮನೆ ಖಾಲಿ ಮಾಡಿ ಸಂಬAಧಿಕರ ಮನೆಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಕಳೆದ ೨೦೧೮ರಲ್ಲಿ ಪ್ರಥಮ ಬಾರಿಗೆ ಪಶ್ಚಿಮಘಟ್ಟ ಪ್ರದೇಶ ಸಾಲಿನಲ್ಲಿ ಭೂ ಕುಸಿತ ಸಂಭವಿಸಿತ್ತು. ಪ್ರಸಕ್ತ ವರ್ಷ ಮತ್ತೆ ಇದೇ ಘಟ್ಟ ಸಾಲಿನಲ್ಲಿ ಭೂ ಕುಸಿತವಾಗಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಭತ್ತದ ಗದ್ದೆಗಳು ನೀರಿನಿಂದ ಮುಳುಗಿದ್ದು ಸಮುದ್ರದಂತೆ ಕಂಡು ಬರುತ್ತಿದೆ. ಎತ್ತ ನೋಡಿದರೂ ಸಾಗರದಂತೆ ನೀರು ಕಾಣುತ್ತಿದೆ. ದಕ್ಷಿಣ ಕೊಡಗಿನ ಗ್ರಾಮೀಣ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಲಕ್ಷö್ಮಣತೀರ್ಥ ನದಿ ಸೇರಿದಂತೆ ನದಿ, ಕೆರೆ, ಕಟ್ಟೆಗಳು ತುಂಬಿದ್ದು ಮಳೆಯ ನೀರು ಭತ್ತದ ಗದ್ದೆಗಳಲ್ಲಿ ಶೇಖರಣೆಯಾಗಿವೆ. ಬಾಳೆಲೆಯಿಂದ ನಿಟ್ಟೂರುವಿಗೆ ತೆರಳುವ ಮುಖ್ಯ ರಸ್ತೆಯ ಎರಡು ಭಾಗದಲ್ಲಿರುವ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದ ಈ ಭಾಗದ ರೈತರ ಭತ್ತದ ಗದ್ದೆಗಳು ಹಾಳಾಗಿವೆ.

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆಯಲ್ಲಿರುವ ಗಿರಿಜನರ ಮನೆಗಳ ಸುತ್ತಲೂ ಜಲಾವೃತ್ತಗೊಂಡಿದ್ದಲ್ಲದೆ ಮನೆಯ ಒಳ ಭಾಗದಿಂದ ಜಲ ಉದ್ಭವಗೊಂಡಿದೆ. ಇದರಿಂದ ಹಲವು ಮನೆಗಳಲ್ಲಿ ವಾಸ ಮಾಡುತ್ತಿರುವವರು ಒಂದೇ ಮನೆಯಲ್ಲಿ ನೆಲೆಸಿದ್ದಾರೆ. ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ಮನೆಯ ಒಳಗೆ ನೀರಿನ ಹರಿವು ಅಧಿಕಗೊಂಡಿರುವುದರಿAದ ಅಡುಗೆ ಮಾಡಲು ಸಾಧ್ಯವಾಗದೆ ಈ ಭಾಗದ ಹಲವು ಕುಟುಂಬಗಳು ಆಹಾರಕ್ಕಾಗಿ ಪರದಾಡುತ್ತಿವೆ.

ಸುದ್ದಿ ತಿಳಿದ ನಿಟ್ಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಮಾಜಿ ಅಧ್ಯಕ್ಷ ಚೆಕ್ಕೇರ ಸೂರ್ಯ ಅಯ್ಯಪ್ಪ, ಸಂಜೆ ವೇಳೆಯಲ್ಲಿ ಈ ಭಾಗದ ಮನೆಗಳಿಗೆ ತೆರಳಿ ತೊಂದರೆಗೆ ಸಿಲುಕಿರುವ ಹಾಡಿ ಜನರನ್ನು ಭೇಟಿ ಮಾಡಿದರು. ಕೂಡಲೇ ಜಿಲ್ಲಾಡಳಿತ ಇವರ ಕಷ್ಟಕ್ಕೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಹಲವು ಮಂದಿ ಒಂದೇ ಮನೆಯಲ್ಲಿ ಉಳಿದುಕೊಂಡಿರುವುದರಿAದ ಆಹಾರ ಸಮಸ್ಯೆಯೊಂದಿಗೆ ಇತರ ಸಮಸ್ಯೆಗಳಿಗೆ ಒಳಗಾಗಿದ್ದಾರೆ.

ಪೊನ್ನಂಪೇಟೆ ತಾಲೂಕು ಬಿ. ಶೆಟ್ಟಿಗೇರಿ ಗ್ರಾಮದ ಕೊತ್ರಿಕಾಡು ಪೈಸಾರಿಗೆ ಹೋಗುವ ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ತೋಡಿನಿಂದ ಒಂದೇ ಸಮನೆ ಹರಿದು ಬರುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗಿದ್ದು ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸುವಂತೆ ಈ ಭಾಗದ ನಾಗರಿಕರು ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.

ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಆಗೊಮ್ಮೆ ಈಗೊಮ್ಮೆ ಸುರಿಯುವ ಮಳೆ ಹೊರತುಪಡಿಸಿದರೆ ಮಿಕ್ಕ ಸಮಯದಲ್ಲಿ ವರುಣ ಬಿಡುವು ನೀಡಿದ್ದಾನೆ. ಆದರೆ ಒಂದೇ ಸಮನೆ ಗಾಳಿ ಬೀಸುತ್ತಿರುವುದರಿಂದ ಹಲವು ವಿದ್ಯುತ್ ಕಂಬಗಳಿಗೆ ಹಾಗೂ ಟ್ರಾನ್ಸ್ಫಾರ್ಮರ್‌ಗಳಿಗೆ ಹಾನಿ ಉಂಟಾಗಿದೆ. ಗ್ರಾಮೀಣ ಪ್ರದೇಶದ ವಿವಿಧ ಭಾಗದಲ್ಲಿ ಮುಂಗಾರಿನ ನಾಟಿ ಕಾರ್ಯ ಭತ್ತದ ಗದ್ದೆಯಲ್ಲಿ ಬಿರುಸಿನಿಂದ ಸಾಗುತ್ತಿದೆ.

ಗಡಿಭಾಗ ಕುಟ್ಟ ಗ್ರಾಮ ಪಂಚಾಯಿತಿಗೆ ಒಳಪಡುವ ಕಾಯಿಮಾನಿ ಮಂಚಳ್ಳಿ ಗ್ರಾಮದ ಕೈಪಳೆರಾ ದೇವಮ್ಮ ಎಂಬುವವರಿಗೆ ಸೇರಿದ ಬಾವಿಯು ಸಂಪೂರ್ಣ ಕುಸಿತಗೊಂಡಿದ್ದು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.ಸೋಮವಾರಪೇಟೆ: ತಾಲೂಕಿನಾದ್ಯಂತ ಮುಂದುವರೆದ ವಾಯು - ವರುಣನಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರು ಹಾಗೂ ಸರ್ಕಾರಿ ಆಸ್ತಿಪಾಸ್ತಿಗಳಿಗೆ ಹಾನಿಯಾಗುತ್ತಿದೆ. ನಿರಂತರವಾಗಿ ಗಾಳಿ-ಮಳೆಯಾಗುತ್ತಿರುವ ಹಿನ್ನೆಲೆ ಅಲ್ಲಲ್ಲಿ ಭೂ ಕುಸಿತ ಸಂಭವಿಸುತ್ತಿದೆ. ಗಾಳಿಗೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು, ಕಂಬಗಳು ಮುರಿದು ಬೀಳುತ್ತಿವೆ. ಪರಿಣಾಮ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿದೆ.

ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಹಲವಷ್ಟು ವಾಸದ ಮನೆಗಳು ಕುಸಿತಕ್ಕೀಡಾಗಿ ಬಡ ಕುಟುಂಬಗಳು ಸಮಸ್ಯೆಗೆ ಸಿಲುಕಿವೆ. ವಾತಾವರಣದಲ್ಲಿ ತೇವಾಂಶ ಅಧಿಕವಾಗಿರುವ ಹಿನ್ನೆಲೆ ವೃದ್ಧರು ಮನೆಯಿಂದ ಹೊರ ಬರಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾದಾಪುರ ವ್ಯಾಪ್ತಿಯ ಮಾದಾಪುರ ಗ್ರಾಮ, ಬಿಳಿಗೇರಿ, ಕುಂಬೂರು ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ನಿರಂತರವಾಗಿದೆ. ಭೂಕುಸಿತ ಹಾಗೂ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿರುವುದರಿಂದ ಕಂಬಗಳು ನೆಲಕ್ಕಚ್ಚಿವೆ. ಇದರೊಂದಿಗೆ ಟ್ರಾನ್ಸ್ಫಾರ್ಮರ್, ತಂತಿಗಳು ರಸ್ತೆಯ ಬದಿಯಲ್ಲಿ ಬಿದ್ದಿದ್ದು, ತುರ್ತು ದುರಸ್ತಿ ಕಾರ್ಯ ಕೈಗೊಳ್ಳುವಲ್ಲಿ ಸೆಸ್ಕ್ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಳೆದ ಒಂದು ವಾರದಿಂದ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿದ್ದು, ಸಾರ್ವಜನಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಡಕಾಗಿದ್ದು, ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಲು ಸೆಸ್ಕ್ ಮುಂದಾಗಬೇಕೆAದು ಕಾಫಿ ಬೆಳೆಗಾರರ ಹೋರಾಟ ಸಮಿತಿ ವಕ್ತಾರ ಶ್ಯಾಂಪ್ರಸಾದ್ ಆಗ್ರಹಿಸಿದ್ದಾರೆ. ಮಾದಾಪುರದ ಕಲ್ಲುಪಾರೆ ಗ್ರಾಮದ ಮುತ್ತಪ್ಪ ಅವರ ವಾಸದ ಮನೆ ಸಂಪೂರ್ಣ ಕುಸಿದು ಬಿದ್ದು, ಕುಟುಂಬಸ್ಥರು ನಿರ್ಗತಿಕರಾಗಿದ್ದಾರೆ. ಸ್ಥಳಕ್ಕೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತುರ್ತು ಪರಿಹಾರ ಕಾರ್ಯ ಕೈಗೊಳ್ಳುವಂತೆ ಕಂದಾಯ ಇಲಾಖೆಗೆ ಸೂಚಿಸಿದ್ದಾರೆ. ನಂದಿಮೊಟ್ಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸೇತುವೆಯ ಒಂದು ಬದಿಯಲ್ಲಿ ಮಣ್ಣು ಕುಸಿತಗೊಂಡಿದೆ. ಬೃಹತ್ ವಾಹನ ಸಂಚಾರ ಸ್ಥಗಿತಗೊಂಡಿದೆ. ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಇನ್ನಷ್ಟು ಅಪಾಯ ತಂದೊಡ್ಡಿದೆ.

ಯಡೂರು ಗ್ರಾಮದ ರಾಣಿ ಅವರಿಗೆ ಸೇರಿದ ವಾಸದ ಮನೆಯ ಮೇಲೆ ಮರ ಬಿದ್ದು, ಶೇ.೩೦ರಷ್ಟು ಹಾನಿ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿ ಶ್ವೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ಕೊಡ್ಲಿಪೇಟೆಗೆ ೫೫ ಮಿ.ಮೀ., ಶನಿವಾರಸಂತೆಗೆ ೫೧, ಶಾಂತಳ್ಳಿಗೆ ೧೨೭, ಸೋಮವಾರಪೇಟೆಗೆ ೩೭.೪ ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.ಶನಿವಾರಸಂತೆ : ಕಳೆದ ಒಂದು ವಾರದಿಂದ ಶನಿವಾರಸಂತೆ - ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಗಾಳಿಯ ಅಬ್ಬರಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜನ ಮನೆಯಿಂದ ಹೊರಬರುತ್ತಿಲ್ಲ ಅಲ್ಲಲ್ಲಿ ಮನೆ ಹಾನಿ, ಬರೆ ಕುಸಿತವಾಗಿದೆ. ಗ್ರಾಮೀಣ ಭಾಗದಲ್ಲಿ ಕೆರೆ, ಕೊಲ್ಲಿ, ಹೊಳೆಗಳು ಮೈದುಂಬಿ ಹರಿಯುತ್ತಿವೆ. ಗ್ರಾಮಸ್ಥರು ಪಟ್ಟಣದತ್ತ ಮೊಗ ಮಾಡುತ್ತಿಲ್ಲ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಗೂರು ಗ್ರಾಮದ ಗೌರಮ್ಮ ಅವರ ಮನೆಯ ಒಳಭಾಗದಲ್ಲಿ ಜಲ ಉಕ್ಕಿ ಬರುತ್ತಿದೆ. ಕಾರೆಕೊಪ್ಪ ಗ್ರಾಮದ ಮೇರಿ ಅವರ ಮನೆಯೂ ಕುಸಿದಿದೆ. ನಂದಿಗುAದ ಗ್ರಾಮದಲ್ಲಿ ಬರೆ ಕುಸಿಯುವ ಹಂತ ತಲುಪಿದೆ.

ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ತೇವಾಂಶ ಅಧಿಕವಾಗಿ ವಿಪರೀತ ಶೀತದಿಂದ ಕೊಳೆ ರೋಗ ತಗುಲಿದ್ದು, ಕಾಫಿ ಫಸಲು ಸಂಪೂರ್ಣವಾಗಿ ನೆಲಕಚ್ಚುವ ಭೀತಿ ಕೃಷಿಕರಲ್ಲಿ ಮೂಡಿದೆ. ಬುಧವಾರ ಮಧ್ಯಾಹ್ನದ ನಂತರ ಮಳೆ - ಗಾಳಿಯ ಪ್ರಮಾಣ ಕಡಿಮೆಯಾಗಿದ್ದು, ಬಿಡುವು ನೀಡುತ್ತಾ ಸುರಿಯಿತು. ಕೃಷಿ ಚಟುವಟಿಕೆ ಚುರುಕಾಗಿ ಕೆಲ ಗ್ರಾಮಗಳ ಗದ್ದೆಗಳಲ್ಲಿ ನಾಟಿ ಕೆಲಸ ಬಿರುಸಾಗಿ ಸಾಗಿತು.ಕುಶಾಲನಗರ: ಕಳೆದ ಕೆಲವು ದಿನಗಳಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ಹರಿವಿನ ಪ್ರಮಾಣ ಬಹುತೇಕ ಇಳಿಕೆಯಾಗಿದೆ. ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯ ನದಿ ತಟದ ನಿವಾಸಿಗಳು ಪ್ರವಾಹದ ಆತಂಕದಿAದ ಹೊರಬರುವಂತಾಗಿದೆ. ತಗ್ಗು ಪ್ರದೇಶದ ಹೊಲ ಗದ್ದೆ, ಬಡಾವಣೆಗಳಿಗೆ ನುಗ್ಗಿದ ನೀರು ಇಳಿಕೆಯಾಗಿದೆ. ಹಾರಂಗಿ ಜಲಾಶಯದಲ್ಲಿ ನೀರಿನ ಒಳ ಹರಿವಿನ ಪ್ರಮಾಣ ಕೂಡ ಕಡಿಮೆಯಾಗಿದ್ದು, ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.ಮದೆ ಗ್ರಾಮ ಪಂಚಾಯಿತಿಯ ಬೆಟ್ಟತ್ತೂರು ಗ್ರಾಮದ ಚೆರಿಯಮನೆ ಆನಂದ ಅವರ ಮನೆಯು ಮಳೆಯಿಂದ ಸಂಪೂರ್ಣ ಹಾನಿಯಾಗಿದೆ.ಸುಂಟಿಕೊಪ್ಪದಲ್ಲಿ ಮನೆ ಮೇಲೆ ಮರ

ಸುಂಟಿಕೊಪ್ಪ: ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ವೇಳೆ ಸುರಿದ ಮಹಾಮಳೆ ಹಾಗೂ ಬಿರುಗಾಳಿಗೆ ಅತ್ತೂರು ನಲ್ಲೂರು ಗ್ರಾಮದ ನಿವಾಸಿ ಅಕ್ಕಮ್ಮ ರೈ ಎಂಬವರ ಮನೆಯ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದ ಪರಿಣಾಮ ಮೇಲ್ಛಾವಣಿ ಸೇರಿದಂತೆ ಗೋಡೆ ಹಾಗೂ ಗೃಹ ಉಪಯೋಗಿ ವಸ್ತುಗಳು ಹಾನಿಗೊಂಡಿವೆ.

ಮನೆಯಲ್ಲಿ ಅಕ್ಕಮ್ಮ ರೈ ಹಾಗೂ ಅವರ ಪುತ್ರ ವಿಶ್ವನಾಥ ರೈ ಒಳಗಿದ್ದು ಯಾವುದೇ ಹಾನಿ ಸಂಭವಿಸಿ ರುವಿರುವುದಿಲ್ಲ. ಸುಂಟಿಕೊಪ್ಪ ನಾಡ ಕಚೇರಿಯ ಕಂದಾಯ ಪರಿವೀಕ್ಷಕ ಪ್ರಶಾಂತ್ ಹಾಗೂ ಗ್ರಾಮಲೆಕ್ಕಿಗರಾದ ನಸೀಮ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.