ಪೊನ್ನಂಪೇಟೆ, ಆ. ೧೦: ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟಂದಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿನ ಚೇರಂಡ ಎಂ. ಕಿರಣ್ ಎಂಬವರ ತೋಟಕ್ಕೆ ದಾಳಿ ಇಟ್ಟಿರುವ ಆನೆಗಳ ಹಿಂಡು ಸುಮಾರು ಒಂದು ಎಕರೆಯಷ್ಟು ವ್ಯಾಪ್ತಿಯಲ್ಲಿ ಪಸಲಿಗೆ ಬಂದಿದ್ದ ಬಾಳೆ ಗಿಡಗಳನ್ನು ತುಳಿದು ಧ್ವಂಸಗೊಳಿಸಿವೆ. ಆನೆಗಳ ತುಳಿತಕ್ಕೆ ಸಿಕ್ಕಿ ೧೨ ತೆಂಗಿನ ಗಿಡಗಳು ನೆಲಕಚ್ಚಿವೆ. ಇದರ ಜೊತೆಗೆ ಅಡಿಕೆ ಹಾಗೂ ಕಾಫಿ ಗಿಡಗಳು ಆನೆ ದಾಳಿಗೆ ನಾಶಗೊಂಡಿವೆ. ಅಲ್ಲದೆ ಚೇರಂಡ ಎಂ. ಮುದ್ದಯ್ಯ ಹಾಗೂ ಚೇರಂಡ ತಿಮ್ಮಯ್ಯ ಅವರ ತೋಟದ ಬಾಳೆಗಿಡ, ಅಡಿಕೆ, ಕಾಫಿ, ತೆಂಗು ಆನೆ ದಾಳಿಗೆ ಸಿಲುಕಿ ನಾಶಗೊಂಡಿವೆ.
ಪ್ರತಿ ವರ್ಷ ಇದೇ ಸಮಯಕ್ಕೆ ತೋಟಕ್ಕೆ ಕಾಡಾನೆಗಳು ದಾಳಿ ಇಡುತ್ತಿದ್ದು, ಬೆಳೆ ನಾಶ ಮಾಡುತ್ತಿವೆ. ಇದರಿಂದಾಗಿ ಇಲ್ಲಿನ ಬೆಳೆಗಾರರು ಹೈರಾಣಾಗಿ ಹೋಗಿದ್ದಾರೆ. ಬಿ. ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಮೊದಲೇ ಮಳೆಯ ಆರ್ಭಟಕ್ಕೆ ಸಿಲುಕಿ ಕಾಫಿ ನೆಲಕ್ಕೆ ಉದುರಿ ನಷ್ಟ ಸಂಭವಿಸಿದೆ. ಮಳೆಯ ದಾಳಿಗೆ ಸಿಲುಕಿ
(ಮೊದಲ ಪುಟದಿಂದ) ಅಳಿದುಳಿದ ಬೆಳೆಯೂ ಕೂಡ ಈಗ ಕಾಡಾನೆಗಳ ದಾಳಿಗೆ ನಾಶವಾಗಿದ್ದು, ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ. ಸರ್ಕಾರ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಆನೆ ದಾಳಿ ಹಾಗೂ ಮಳೆಯಿಂದ ಸಂಕಷ್ಟಕ್ಕೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಇಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ.
-ಚನ್ನನಾಯಕ