ಸಿದ್ದಾಪುರ, ಆ. ೧೦: ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕನೋರ್ವ ಬಲಿಯಾದ ಘಟನೆ ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಲ್ಕೋಡ್ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಚೆಟ್ಟಳ್ಳಿಯ ಮಲ್ಕೋಡ್ ಗ್ರಾಮದ ನಿವಾಸಿಯಾಗಿರುವ ಮೊಹಮ್ಮದ್ (೬೦) ಎಂಬವರು ಸಮೀಪದ ಕಂಡಕೆರೆಗೆ ಕೂಲಿ ಕೆಲಸಕ್ಕೆ ಬೆಳಿಗ್ಗೆ ಸುಮಾರು ೭ ಗಂಟೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಹಠಾತ್ತನೆ ಎದುರಾದ ಕಾಡಾನೆಯೊಂದು ಮೊಹಮ್ಮದ್ ಅವರ ಮೇಲೆ ಧಾಳಿ ನಡೆಸಿ ಸೊಂಟ ಹಾಗೂ ಕೈ ಭಾಗಕ್ಕೆ ತುಳಿದಿದೆ. ಕಾಡಾನೆ ಧಾಳಿಗೆ ಸಿಲುಕಿ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಅವರು ಕಿರುಚಿಕೊಂಡಾಗ ಕಾಡಾನೆ ಅಲ್ಲಿಂದ ಕಾಲ್ಕಿತ್ತಿತ್ತು. ಬೊಬ್ಬೆ ಕೇಳಿದ ತಕ್ಷಣ ಸ್ಥಳೀಯರು ಆಗಮಿಸಿ ಗಂಭೀರ ಗಾಯಗೊಂಡು ಒದ್ದಾಡುತ್ತಿದ್ದ ಮೊಹಮ್ಮದ್ ಅವರನ್ನು ಕೂಡಲೇ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ಜೀವನ್ಮರಣ ಸ್ಥಿತಿಯಲ್ಲಿದ್ದ ಮೊಹಮ್ಮದ್ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಮೈಸೂರಿಗೆ ಕರೆದುಕೊಂಡು ಹೋಗುವಾಗ ಹುಣಸೂರು ಬಳಿ ಮಾರ್ಗ ಮಧ್ಯೆ ಮೃತಪಟ್ಟರು.

ಮೃತ ಮೊಹಮ್ಮದ್ ಅವರು ಪತ್ನಿಯನ್ನು ಅಗಲಿದ್ದಾರೆ. ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಯಿತು. ತುರ್ತು ಪರಿಹಾರವಾಗಿ ಮಹಮ್ಮದ್ ಅವರ ಪತ್ನಿಗೆ ರೂ. ೨ ಲಕ್ಷ ನೀಡಲಾಯಿತು.

ಸ್ಥಳಕ್ಕೆ ಮಡಿಕೇರಿ ವಿಭಾಗದ ಡಿ.ಸಿ.ಎಫ್. ಪೂವಯ್ಯ, ಎ.ಸಿ.ಎಫ್. ಎ.ಎ. ಗೋಪಾಲ, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ, ಉಪ ವಲಯಾರಣ್ಯಾ ಧಿಕಾರಿ ಸುಬ್ರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೆಟ್ಟಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ.

(ಮೊದಲ ಪುಟದಿಂದ) ಅಲ್ಲದೇ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ. ಕಾರ್ಮಿಕರಿಗೆ ಹಾಗೂ ಬೆಳೆಗಾರರಿಗೆ ಕಾಫಿ ತೋಟದ ಒಳಗೆ ಹೋಗಲು ಭಯದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

-ವಾಸು ಕಾಡಾನೆ ತುಳಿತಕ್ಕೆ ಮೃತಪಟ್ಟ ಮಹಮ್ಮದ್ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ರೂ. ೨ ಲಕ್ಷದ ಚೆಕ್ಕನ್ನು ಮಡಿಕೇರಿ ವಿಭಾಗದ ಡಿಸಿಎಫ್ ಹಾಗೂ ಎಸಿಎಫ್ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಂ ಉಪವಲಯ ಅಧಿಕಾರಿ ಸುಬ್ರಾಯ ನೀಡಿದರು.