ಶನಿವಾರಸಂತೆ, ಆ. ೧೦: ಸಮೀಪದ ಕೊಡ್ಲಿಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಆಂಗ್ಲ ಮಾಧ್ಯಮಕ್ಕೆ ಅನುಮತಿಗೆ ಆಗ್ರಹಿಸಿ ಪೋಷಕರು ಸೋಮವಾರದಿಂದ ಆರಂಭಿಸಿದ ಧರಣಿ ಸತ್ಯಾಗ್ರಹ ೩ನೇ ದಿನವೂ ಮುಂದುವರೆಯಿತು.

೨ನೇ ದಿನ ಧರಣಿನಿರತ ಪೋಷಕರು ಮೆರವಣಿಗೆಯಲ್ಲಿ ಬಸ್ ನಿಲ್ದಾಣಕ್ಕೆ ತೆರಳಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಕೊಡ್ಲಿಪೇಟೆ ಹೋಬಳಿ ಕಂದಾಯ ಪರಿವೀಕ್ಷಕ ಮನುಕುಮಾರ್ ಸ್ಥಳಕ್ಕೆ ಬಂದು ಜಿಲ್ಲಾಡಳಿತದ ಪರವಾಗಿ ಮನವಿ ಸ್ವೀಕರಿಸಿದರು.

ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಶಾಲೆ ಮುಂಭಾಗ ಮಳೆ-ಗಾಳಿ ಲೆಕ್ಕಿಸದೇ ಕುಳಿತ ಧರಣಿ ನಿರತರು ಶಿಕ್ಷಣ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಬುಧವಾರ ಪ್ರಸಕ್ತ ಸಾಲಿನ ಶೈಕ್ಷಣಿಕ ಅಧ್ಯಯನಕ್ಕೆ ವಿದ್ಯಾರ್ಥಿಗಳ ನೋಂದಣಿಗೆ ಕೊನೆಯ ದಿನವಾಗಿತ್ತು.

ಧರಣಿ ಸ್ಥಳಕ್ಕೆ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಭೇಟಿ ನೀಡಿ ಸರಕಾರದ ಜೊತೆ ವ್ಯವಹರಿಸಿ, ಆದೇಶದನ್ವಯ ಸಹಕಾರ ನೀಡುವ ಭರವಸೆ ನೀಡಿದರು.

ಧರಣಿ ನೇತೃತ್ವ ವಹಿಸಿದ್ದ ಕೊಡಗು ರಕ್ಷಣಾ ವೇದಿಕೆ ಕಾರ್ಯದರ್ಶಿ ಡಿ.ಎನ್. ವಸಂತ್ ಮಾತನಾಡಿ, ಬಿಇಒ ಅವರು ನೋಂದಣಿ ದಿನವನ್ನು ಇನ್ನೂ ೨ ದಿನಕ್ಕೆ ಮುಂದುವರೆಸಿರು ವುದಾಗಿ ತಿಳಿಸಿದರು. ಸದ್ಯಕ್ಕೆ ಧರಣಿ ನಿರತರು ತಟಸ್ಥರಾಗಿದ್ದಾರೆ. ಪೋಷಕರು ಗುರುವಾರ ಬೆಂಗಳೂರಿಗೆ ನಿಯೋಗ ತೆರಳಲಿದ್ದು, ಸರಕಾರದ ಕಾರ್ಯದರ್ಶಿ ಹಾಗೂ ಎಸ್‌ವಿಪಿ ಆಯುಕ್ತೆ ಕಾವೇರಿ ಅವರನ್ನು ಭೇಟಿ ಮಾಡಲಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ಅನುಮತಿ ದೊರೆತರೆ ಧರಣಿ ಕೈಬಿಡಲಾಗುವುದು. ಇಲ್ಲವಾದಲ್ಲಿ ಮುಂದುವರೆಸ ಲಾಗುವುದು ಎಂದರು.

ಗ್ರಾ.ಪA. ಸದಸ್ಯ ಕೆ.ಆರ್. ಚಂದ್ರಶೇಖರ್, ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ದಿನೇಶ್ ಕುಮಾರ್, ಮುಖಂಡರಾದ ಚಂದ್ರಪ್ಪ, ಅಲ್ತಾಫ್, ಡಿ.ಬಿ. ವಿಜಯ್, ರಾಜೇಶ್, ಎಸ್‌ಡಿ ಎಂಸಿ ಅಧ್ಯಕ್ಷೆ ಮಮತಾ ರಮೇಶ್, ಪೋಷಕರಾದ ಡಿ.ಎಸ್. ವಸಂತ್, ಹರೀಶ್ ಭಂಡಾರ, ಬಸಪ್ಪ, ನಂದಿತಾ, ಆಲಿ, ಫೈರೋಝ್, ಮಮತಾ, ಸುಮಯ್ಯಾ ಇತರರು ಹಾಜರಿದ್ದರು.