ಚೆಟ್ಟಳ್ಳಿ, ಆ. ೧೦: ಹಲವು ವರ್ಷಗಳಿಂದ ಪತ್ನಿಯ ಮೇಲೆ ಸಂಶಯಗೊAಡಿದ್ದ ಪತಿ ರಾತ್ರಿ ಒಂಟಿನಳಿಕೆ ಕೋವಿಯಿಂದ ಹತ್ಯೆ ಮಾಡಿದ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ.

ಚೆಟ್ಟಳ್ಳಿಯ ಬಟ್ಟೀರ ಗೋಪಾಲ (ಕಿಶನ್-೫೩) ಪತ್ನಿ ಶಷ್ಮಾ (೪೩) ರೊಂದಿಗೆ ಜಗಳವಾಡಿ ಕೋಣೆಯೊಳಗೆ ತನ್ನ ಒಂಟಿನಳಿಕೆ ಕೋವಿಯಿಂದ ಎದೆಯ ಭಾಗಕ್ಕೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ನಂತರ ಅವಳೇ ಕೋವಿಯಿಂದ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕುಟುಂಬದವರಿಗೆ ಹಾಗೂ ಬೆಂಗಳೂರಿನಲ್ಲಿರುವ ಪತ್ನಿಯ ತಂಗಿ ಮನೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಮಗ ನಿಧಿ ಹಾಗೂ ಪತ್ನಿಯ ತಂಗಿ ಶುಭಾಳಿಗೆ ಫೋನಾಯಿಸಿ ತಿಳಿಸಿದ್ದಾನೆ.

ಸಂಶಯಗೊAಡ ಊರಿನವರು ರಾತ್ರಿ ಚೆಟ್ಟಳ್ಳಿ ಪೊಲೀಸ್ ಉಪಠಾಣೆಗೆ ವಿಷಯ ತಿಳಿಸಿದ ಮೇರೆಗೆ ರಾತ್ರಿ ೧೧.೫೭ಕ್ಕೆ ಠಾಣಾ ಎಎಸ್‌ಐ ಶ್ರೀನಿವಾಸ್ ಪಿ.ಟಿ. ತೆರಳಿ ಮೇಲಾಧಿಕಾರಿಗಳ ಆದೇಶದ ಮೇರೆಗೆ ತಕ್ಷಣವೇ ಆರೋಪಿಯನ್ನು ಬಂಧಿಸಿದ್ದಾರೆ.

ಎಎಸ್‌ಐ ಮಡಿಕೇರಿ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಗ್ರಾಮಾಂತರ ಠಾಣೆಯ ಉಸ್ತುವಾರಿ ವೃತ್ತನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿಗಳಾದ ದೇವರಾಜು, ವಾಣಿಶ್ರೀ ರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿ ವಿಚಾರಿಸಿದಾಗ ತಾನೇ ಗುಂಡಿಕ್ಕಿ ಪತ್ನಿಯನ್ನು ಕೊಂದಿರುವುದಾಗಿ ಪತಿ ಗೋಪಾಲ ಒಪ್ಪಿಕೊಂಡಿದ್ದಾನೆ. ಇಂದು ಎಸ್‌ಪಿ ಅಯ್ಯಪ್ಪ ಎಂ.ಎ. ಹಾಗೂ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಆಗಮಿಸಿದ್ದರು.

ಸ್ಥಳ ಮಹಜರು ನಡೆಸಿ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸಂಜೆ ಚೆಟ್ಟಳ್ಳಿಯ ಬಟ್ಟೀರ ಕುಟುಂಬದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.