ಮಡಿಕೇರಿ, ಆ. ೧೦ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಸರಕಾರ ಇದೀಗ ನೂತನವಾಗಿ ನಾಲ್ವರು ಸದಸ್ಯರನ್ನು ನೇಮಕ ಮಾಡಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ತಾ. ೬ ರಂದು ಆದೇಶ ಹೊರಡಿಸಲಾಗಿದೆ. ನೂತನ ಸದಸ್ಯರುಗಳಾಗಿ ನಾಗೇಶ್ ಕಾಲೂರು, ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ, ಚಾಮೆರ ದಿನೇಶ್ ಬೆಳ್ಯಪ್ಪ ಹಾಗೂ ಸೋಮೆಯಂಡ ಕೌಶಲ್ಯ ಸತೀಶ್ ಅವರುಗಳನ್ನು ನೇಮಕ ಮಾಡಲಾಗಿದೆ.
ಸರಕಾರದ ಈ ಆಯ್ಕೆ ಇದೀಗ ಅಚ್ಚರಿ ಮೂಡಿಸಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಏಕೆಂದರೆ ಕೊಡವ ಅಕಾಡೆಮಿಯ ಅಧಿಕಾರಾವಧಿ ಮುಕ್ತಾಯಗೊಳ್ಳಲು ಇನ್ನು ಉಳಿದಿರುವುದು ಕೇವಲ ಎರಡು ತಿಂಗಳು ಮಾತ್ರ. ಮುಂದಿನ ಅಕ್ಟೋಬರ್ ೧೫ಕ್ಕೆ ಅಕಾಡೆಮಿಯ ಹಾಲಿ ಅಧಿಕಾರಾವಧಿಯೇ ಪೂರ್ಣಗೊಳ್ಳಲಿದೆ. ಕೇವಲ ಎರಡೇ ಎರಡು ತಿಂಗಳ ಅವಧಿ ಉಳಿದಿರುವಾಗ ಮಾಡಿರುವ ಈ ಆಯ್ಕೆಯ ಮರ್ಮವೇನು ಎಂಬದು ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ೨೦೧೯ರಲ್ಲಿ ಅಕ್ಟೋಬರ್ ೧೫ ರಂದು ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ಸರಕಾರ ಅಕಾಡೆಮಿಗೆ ೭ ಸದಸ್ಯರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿತ್ತು. ಅಕಾಡೆಮಿಗೆ ಓರ್ವ ಅಧ್ಯಕ್ಷರು ಸೇರಿದಂತೆ ೧೧ ಸದಸ್ಯರ ಪಟ್ಟಿಯನ್ನು ಸರಕಾರ ನೇಮಕ ಮಾಡುತ್ತದೆ. ಈ ಆಡಳಿತ ಮಂಡಳಿ ಮೂವರನ್ನು ನಾಮನಿರ್ದೇಶನ ಮಾಡಿಕೊಳ್ಳಬಹುದಾಗಿದೆ. ಆದರೆ ಸರಕಾರ ಆ ಸಂದರ್ಭ ಪ್ರಕಟಿಸಿದ್ದು ಅಧ್ಯಕ್ಷರು ಹಾಗೂ ಏಳು ಸದಸ್ಯರನ್ನು ಮಾತ್ರ. ಮೂರು ಸ್ಥಾನವನ್ನು ಪ್ರಕಟಿಸಿರಲಿಲ್ಲ. ಬಳಿಕ ಈ ಆಡಳಿತ ಮಂಡಳಿ ಮೂವರನ್ನು ನಾಮನಿರ್ದೇಶನ ಮಾಡಿಕೊಂಡಿತ್ತು.
ಆದರೆ ಸರಕಾರ ಈ ತನಕವೂ ಸರಕಾರದ ಮೂಲಕ ನೇಮಕ ಮಾಡಬೇಕಿದ್ದ ಮೂವರು ಸದಸ್ಯರನ್ನು ಆಯ್ಕೆ ಮಾಡಿರಲೇ ಇಲ್ಲ. ಈ ಬಗ್ಗೆ ಸಾಕಷ್ಟು ಮನವಿಗಳು ಸಲ್ಲಿಕೆಯಾಗಿದ್ದರೂ ಇದಕ್ಕೆ ಪುರಸ್ಕಾರ ದೊರೆತಿರಲಿಲ್ಲ.