ಕುಶಾಲನಗರ, ಆ.೮: ಮಳೆಗಾಲದ ಅವಧಿಯಲ್ಲಿ ಮೂರು ತಿಂಗಳ ಕಾಲ ಹಾರಂಗಿ ಜಲಾಶಯದಲ್ಲಿ ಶೇ. ೫೦ ರಿಂದ ೬೦ರಷ್ಟು ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಹೆಚ್ಚುವರಿ ನೀರನ್ನು ಹಂತ ಹಂತವಾಗಿ ನದಿಗೆ ಬಿಡುಗಡೆಗೊಳಿಸುವ ಮೂಲಕ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ಪ್ರಮುಖರು ಹಾರಂಗಿ ಅಣೆಕಟ್ಟು ಅಧಿಕಾರಿಗಳಿಗೆ ಒತ್ತಾಯಿಸಿದರು.
ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆಯ ಕೇಂದ್ರ ಸಮಿತಿ ಮತ್ತು ಪಟ್ಟಣದ ವಿವಿಧ ಬಡಾವಣೆಗಳ ಪ್ರತಿನಿಧಿಗಳು ಮತ್ತು ಜನಪ್ರತಿನಿಧಿಗಳು ಹಾರಂಗಿ ಯೋಜನಾ ವೃತ್ತದ ಕಚೇರಿಗೆ ತೆರಳಿ ಅಧೀಕ್ಷಕ ಅಭಿಯಂತರ ಚೆನ್ನಕೇಶವ ಅವರೊಂದಿಗೆ ಚರ್ಚಿಸಿ ಮನವಿ ಪತ್ರ ಸಲ್ಲಿಸಿದರು.
ಹಾರಂಗಿ ಜಲಾಶಯದಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸುವುದು, ಅಣೆಕಟ್ಟಿನಲ್ಲಿ ನೀರಿನ ಒಳಹರಿವು, ಜಲಾನಯನ ಪ್ರದೇಶದಲ್ಲಿ ಬೀಳುವ ಮಳೆ ಪ್ರಮಾಣ, ಕಾವೇರಿ ನದಿ ನೀರಿನ ಹರಿವಿನ ಪ್ರಮಾಣದ ಬಗ್ಗೆ ನಿತ್ಯ ಮಾಹಿತಿ ಸಂಗ್ರಹಿಸಲು ನಿಗಮದ ಮೂಲಕ ವಿಶೇಷ ತಜ್ಞರ ತಂಡ ನಿಯೋಜಿಸುವುದು, ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಮುನ್ನ ಕುಶಾಲನಗರ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ಮುನ್ನೆಚ್ಚರಿಕೆ ಪ್ರಕಟಣೆ ಹೊರಡಿಸುವುದು. ಕಾವೇರಿ ನದಿಯ ೨ ಕಡೆ ತಡೆಗೊಡೆ ನಿರ್ಮಾಣ ಸೇರಿದಂತೆ ಪ್ರವಾಹ ನಿಯಂತ್ರಣಕ್ಕೆ ಅವಶ್ಯವಿರುವ ಶಾಶ್ವತ ಯೋಜನೆಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು, ಕುಶಾಲನಗರದಿಂದ ಶಿರಂಗಾಲ ತನಕ ನದಿಯಿಂದ ಮರಳೆತ್ತುವ ಕಾಯಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು. ಈ ಮೂಲಕ ನದಿಯಲ್ಲಿ ನೀರು ಸರಾಗವಾಗಿ ಹರಿಯಲು ಅವಕಾಶ ಕಲ್ಪಿಸುವುದು. ಈ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭ ಪ್ರತಿಕ್ರಿಯಿಸಿದ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಚೆನ್ನಕೇಶವ ಅವರು, ಜಲಾಶಯದಲ್ಲಿ ೬ ಅಡಿಗಳಷ್ಟು ಅಂತರವನ್ನು ಕಾಯ್ದುಕೊಂಡು ಹೆಚ್ಚುವರಿ ನೀರನ್ನು ಹಂತ ಹಂತವಾಗಿ ನದಿಗೆ ಬಿಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಉಳಿದಂತೆ ಎಲ್ಲಾ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎA. ಚರಣ್, ಸಂತ್ರಸ್ತರ ವೇದಿಕೆ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಉಪಾಧ್ಯಕ್ಷ ತೊರೇರ ಉದಯಕುಮಾರ್, ಪ್ರಧಾನ ಕಾರ್ಯದರ್ಶಿ ವರದ, ಖಜಾಂಚಿ ಕೊಡಗನ ಹರ್ಷ, ಹಾಗೂ ಕುಶಾಲನಗರ ಪಟ್ಟಣದ ಬಡಾವಣೆ ಪ್ರತಿನಿಧಿಗಳು ಇದ್ದರು.ಚಿತ್ರದಲ್ಲಿ ಹಾರಂಗಿ ಯೋಜನಾ ವೃತ್ತದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಸಂದರ್ಭ.