ವೀರಾಜಪೇಟೆ, ಆ. ೮: ನಾಡು, ನುಡಿ, ಸಂಸ್ಕೃತಿ ಎಂಬುದು ದೇಶದ ಅಸ್ಮಿತೆಯಾಗಿದೆ. ದೇಶಾಭಿಮಾನದೊಂದಿಗೆ ಉನ್ನತವಾದ ದೇಶಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗೃತರಾಗಬೇಕು ಎಂದು ಕಲಾಶ್ರೀ ಪ್ರಶಸ್ತಿ ವಿಜೇತೆ, ಪ್ರಪ್ರಥಮ ಮಹಿಳಾ ಚಂಡೆ ವಾದಕಿ ರಂಗಭೂಮಿ ಕಲಾವಿದೆ ದಿವ್ಯಶ್ರೀ ನಾಯಕ್ ಕರೆ ನೀಡಿದರು.

ಸಂತ ಅನ್ನಮ್ಮ ವಿದ್ಯಾಸಂಸ್ಥೆ ವೀರಾಜಪೇಟೆ, ಸಂತ ಅನ್ನಮ್ಮ ಪದವಿ ಕಾಲೇಜು ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಒಂದು ದಿನದ ರಾಷ್ಟçಮಟ್ಟದ ಅಂತರ್ ಕಾಲೇಜು ಪಠ್ಯೇತರ ಮೇಳವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ದಿವ್ಯಶ್ರೀ ನಾಯಕ್, ವಿಶಾಲ ಭಾರತದ ಸಂಸ್ಕೃತಿಯು ಧೀಮಂತವಾಗಿದ್ದು, ಭಿನ್ನ ಭಾಷೆ, ಭಿನ್ನ ಸಂಸ್ಕೃತಿಗಳ ನೆಲೆಬೀಡಾಗಿರುವ ನಾಡು ನುಡಿ ಎಂದಿಗೂ ಮಾಸದಂತೆ ಸಂರಕ್ಷಣೆ ಮಾಡಬೇಕು ಎಂದರು.

ಸAತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ರೆ.ಫಾ. ಐಸಾಕ್ ರತ್ನಾಕರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಸಂಸ್ಥೆಯ ಪದವಿ ಕಾಲೇಜು ವಿಭಾಗದ ಪ್ರಪ್ರಥಮ ರಾಷ್ಟçಮಟ್ಟದ ಕಾರ್ಯಕ್ರಮವಾಗಿದೆ. ಕೊಡಗು ಜಿಲ್ಲೆ ಸೇರಿದಂತೆ ಪುತ್ತೂರು, ಮಂಗಳೂರು, ಮೈಸೂರು ಜಿಲ್ಲೆಗಳ ೧೧ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯ ರೂಪಿಸಲು ವಿವಿಧ ಪಠ್ಯೇತರ ಚಟುವಟಿಕೆಗಳ ೮ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ಒಟ್ಟು ೧೭೫ ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಕಾರ್ಯಕ್ರಮ ಸಂಯೋಜಕಿ ಹೇಮಾ ಬಿ.ಡಿ. ಉಪಸ್ಥಿತರಿದ್ದರು.

ರಾಷ್ಟçಮಟ್ಟದ ಕಾಲೇಜು ಮೇಳದಲ್ಲಿ ಕ್ರೀಡಾ, ನಾಟಕ, ಉತ್ತಮ ಮ್ಯಾನೇಜರ್, ಮಾರ್ಕೆಟಿಂಗ್, ಮಾಹಿತಿ ಮತ್ತು ತಂತ್ರಜ್ಞಾನ, ಉತ್ತಮ ಉದ್ಯಮಗಾರ, ಛಾಯಾಚಿತ್ರ ಮತ್ತು ಜನಪದ ನೃತ್ಯ ಸ್ಪರ್ಧೆ ಸೇರಿ ಒಟ್ಟು ೮ ವಿವಿಧ ವಿಭಾಗಗಳ ಸ್ಪರ್ಧೆ ನಡೆಯಿತು. ಎಫ್.ಎಂ.ಸಿ. ಮಡಿಕೇರಿ ಕಾಲೇಜಿನ ಉಪನ್ಯಾಸಕರಾದ ಹರ್ಷದ್ ಬಿ ಹಬೀಬ್, ಕಾವೇರಿ ಕಾಲೇಜು ಗೊಣಿಕೊಪ್ಪಲು ಉಪನ್ಯಾಸಕ ಪೊನ್ನಪ್ಪ, ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶರತ್ ಶೆಟ್ಟಿ ಮತ್ತು ಮೈಸೂರು ಖಾಸಗಿ ಕಂಪೆನಿಯ ಮಾರ್ಕೆಟಿಂಗ್ ಮ್ಯಾನೇಜರ್ ನಿಖಿಲ್ ಗಂಗಾಧರ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಸೇಫಿಯಂಟ್ ಕಾಲೇಜು ಮೈಸೂರು ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸಂತ ಫಿಲೋಮಿನಾ ಕಾಲೇಜು ಪುತ್ತೂರು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಅಲ್ಲದೆ ಆಯೋಜಿತ ೮ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಧ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಸ್ಥಾನದ ವೈಯಕ್ತಿಕ ಪ್ರಶಸ್ತಿ ಮತ್ತು ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.