ಮಡಿಕೇರಿ, ಆ. ೯: ಜಿಲ್ಲಾ ವಕ್ಫ್ ಸಮಿತಿಯಲ್ಲಿ ಕೆಲ ಬಿಜೆಪಿ ವಿರೋಧಿ ಗಳಿಗೂ ಅವಕಾಶ ನೀಡಲಾಗಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಬಿ.ಹೆಚ್. ಮುಸ್ತಫ ಹಾಗೂ ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಸಮೀರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರುಗಳು ಮಾತನಾಡಿದರು. ಬಿಜೆಪಿಯ ಪರವಾಗಿ ಕೆಲಸ ಮಾಡುವ ನಮ್ಮನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಟೀಕಿಸುತ್ತಾ; ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರಕಾರವನ್ನು ವಿರೋಧಿಸುವ ಕೆಲವು ಮಂದಿ ವಕ್ಛ್ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಬಿಜೆಪಿಯ ಜಿಲ್ಲಾ ನಾಯಕರು ಕಳುಹಿಸಿದ್ದ ಕಾರ್ಯಕರ್ತರ ಪಟ್ಟಿಯನ್ನು ನಿರ್ಲಕ್ಷಿಸಿ ಬಿಜೆಪಿಯ ವಿರುದ್ಧ ಮಾತನಾಡುವ ವರಿಗೆ ಮಣೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ವಿರೋಧಿಗಳಾಗಿದ್ದುಕೊಂಡು ವಕ್ಫ್ ಸಮಿತಿಯಲ್ಲಿ ಅವಕಾಶ ಪಡೆದು ಕೊಂಡವರು ಬಿಜೆಪಿ ಪಕ್ಷವನ್ನು ಸೇರಿ ಬಿಜೆಪಿಗಾಗಿ ಕೆಲಸ ಮಾಡುವಂತಾಗ ಬೇಕು, ಇಲ್ಲವಾದರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.

ನಗರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಸಯ್ಯದ್ ಯಾಸಿನ್ ಮಾತನಾಡಿ, ವಕ್ಫ್ ಸಮಿತಿಗೆ ಸೇರಿದ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು, ಮೊಕದ್ದಮೆ ಎದುರಿಸುತ್ತಿರುವವರು ಹಾಗೂ ವಕ್ಫ್ ಸಮಿತಿಗೆ ವಿರುದ್ಧವಾಗಿರುವ ಕೆಲವರಿಗೂ ವಕ್ಛ್ ಸಮಿತಿಯಲ್ಲಿ ಅವಕಾಶ ನೀಡಲಾಗಿದ್ದು, ವಕ್ಛ್ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಅಂತಹವರನ್ನು ವಕ್ಛ್ ಸಮಿತಿಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ವಕ್ಫ್ ಸಮಿತಿ ಸದಸ್ಯ ಮಹಮ್ಮದ್ ಶಾಜಿ, ಅಲ್ಪಸಂಖ್ಯಾತ ಮೋರ್ಚಾ ಸದಸ್ಯ ಪಿ. ಮುಸ್ತಫ ಉಪಸ್ಥಿತರಿದ್ದರು.