ಮಡಿಕೇರಿ, ಆ. ೯: ಕೊಡಗು ಜಿಲ್ಲೆಯಲ್ಲಿ ಪಾಳುಬಿದ್ದ ಕೆರೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ರೂ. ೧೦ ರಿಂದ ೧೧ ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸಣ್ಣ ನೀರಾವರಿ, ಕಾನೂನು ಹಾಗೂ ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಮಾಹಿತಿ ನೀಡಿದರು.
ಮಡಿಕೇರಿ ತಾಲೂಕಿನ ಕೊಯನಾಡುವಿನ ಕಿಂಡಿ ಚೆಕ್ಡ್ಯಾಂ, ಮಾರ್ಪಡ್ಕ ಹಾಗೂ ದಬಡ್ಕದಲ್ಲಿ ಹಾನಿಯಾಗಿರುವ ಸೇತುವೆಯನ್ನು ಪರಿಶೀಲಿಸಿದರು. ಮಳೆಗಾಲದ ಸಂದರ್ಭ ಚೆಕ್ಡ್ಯಾಂಗಳಿಗೆ ಯಾವುದೇ ರೀತಿ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ನಿರ್ದೇಶಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಳೆಯಿಂದ ಸಣ್ಣ ನೀರಾವರಿ ಇಲಾಖೆಯ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿಲ್ಲ. ಕೊಯನಾಡು ಕಿಂಡಿ ಅಣೆಕಟ್ಟಿನಲ್ಲಿ ಮರ ಹರಿದು ಬಂದ ಪರಿಣಾಮ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇದೀಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ ಎಂದರು.
ಈ ಸಂದರ್ಭ ಸ್ಥಳೀಯ ನಿವಾಸಿ ಸುಬ್ರಮಣ್ಯ ಉಪಾಧ್ಯಾಯ ಸಚಿವರೊಂದಿಗೆ ಮಾತನಾಡಿ, ಕಿಂಡಿ ಅಣೆಕಟ್ಟೆಯಿಂದ ಉಪಯುಕ್ತವಾಗಿದೆ. ಆದರೆ ಮಳೆಗಾಲ ಸಂದರ್ಭ ಎದುರಾಗುವ ಸಮಸ್ಯೆ ನಿಯಂತ್ರಣಕ್ಕೆ ತಡೆಗೋಡೆ ಹಾಗೂ ಸೇತುವೆ ನಿರ್ಮಾಣಕ್ಕೆ ಮನವಿ ಮಾಡಿದರು.
ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ರೂ. ೧೦ ರಿಂದ ೧೧ ಕೋಟಿ ಅನುದಾನ ಬಿಡುಗಡೆಗೊಳಿಸಲಾಗುವುದು. ಕೆರೆಗಳ ಪುನಶ್ಚೇತನವನ್ನು ಆಕರ್ಷಕವಾಗಿ ಮಾಡಿ ಪ್ರವಾಸೋದ್ಯಮಕ್ಕೆ ಪೂರಕ ಗೊಳಿಸಲಾಗುವುದು. ಹೊಸಗುತ್ತಿಯಲ್ಲಿ ರೂ. ೭ ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸಲು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಹಲವರಿಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಹೊಸಗುತ್ತಿಯಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಬೇಡಿಕೆ ಸಲ್ಲಿಸಿದ ಸಂದರ್ಭ ತ್ವರಿತವಾಗಿ ಸಚಿವರು ಹಣ ಬಿಡುಗೊಳಿಸಿದ್ದಾರೆ. ಇದರಿಂದ ಸುತ್ತಮುತ್ತಲಿನ ಜನರಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪಶ್ಚಿಮವಾಹಿನಿ ಯೋಜನೆಯಡಿ
(ಮೊದಲ ಪುಟದಿಂದ) ನಿರ್ಮಿಸಿದ ಕಿಂಡಿ ಚೆಕ್ ಡ್ಯಾಂನಲ್ಲಿ ನಿರೀಕ್ಷೆಗೂ ಮೀರಿ ನೀರು ಬಂದ ಹಿನ್ನೆಲೆ ಸಮಸ್ಯೆಯಾಗಿದೆ. ಈ ಸಂಬAಧ ಕ್ರಮವಹಿಸಲಾಗುವುದು ಎಂದರು.
ಮಳೆಹಾನಿ ಪ್ರದೇಶಗಳಿಗೆ ಭೇಟಿ ಸಂದರ್ಭ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಎಂ.ಎ. ಅಯ್ಯಪ್ಪ, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ, ತಹಶೀಲ್ದಾರ್ ಎಸ್. ಮಹೇಶ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾದ ರಾಘವನ್, ಗೋಕುಲ್ದಾಸ್, ಕುಮಾರಸ್ವಾಮಿ ಹಾಜರಿದ್ದರು.