ಮಡಿಕೇರಿ, ಆ. ೮ : ಮಹಾಮಳೆಯ ಕಷ್ಟ, ನಷ್ಟಗಳನ್ನು ಅನುಭವಿಸಿ ರಾಜ್ಯಕ್ಕೆ ಕಾವೇರಿ ನೀರನ್ನು ಒದಗಿಸುತ್ತಿರುವ ಕೊಡಗು ಜಿಲ್ಲೆಗೆ ಮಳೆಹಾನಿ ಪರಿಹಾರವನ್ನು ನೀಡದೆ ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ, ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸುವುದಾಗಿ ತಿಳಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಸೈಯದ್ ಬಾವ, ಜಿಲ್ಲೆಗೆ ತುರ್ತಾಗಿ ೫೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಸರಣಿ ಭೂಕಂಪನ ಮತ್ತು ಜಲಸ್ಫೋಟದಿಂದ ಜನರು ಆತಂಕದ ನಡುವೆ ಜೀವನ ಸಾಗಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ ಕೊಡಗಿನ ಮೇಲೆ ಕರುಣೆಯೇ ಬರುತ್ತಿಲ್ಲ. ಜಿಲ್ಲೆಗೆ ಏನೂ ಆಗಿಲ್ಲ ಎನ್ನುವ ರೀತಿಯಲ್ಲಿ ಆಡಳಿತ ವ್ಯವಸ್ಥೆ ವರ್ತಿಸುತ್ತಿದ್ದು, ಜನರು ನಿರಾಶೆಯಿಂದಲೇ ದಿನ ಕಳೆಯುವಂತಾಗಿದೆ. ವೈಜ್ಞಾನಿಕ ರೂಪದಲ್ಲಿ ಮಳೆಹಾನಿಯನ್ನು ಸಮೀಕ್ಷೆ ಮಾಡಿದರೆ ಕೊಡಗು ಜಿಲ್ಲೆಯಲ್ಲಿ ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಆಸ್ತಿಪಾಸ್ತಿಗೆ ಹಾನಿಯಾಗಿರುವುದು ಬೆಳಕಿಗೆ ಬರುತ್ತದೆ. ಆದ್ದರಿಂದ ಕೊಡಗಿಗೆ ತುರ್ತು ಪರಿಹಾರವಾಗಿ ೫೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಉಸ್ಮಾನ್ ಒತ್ತಾಯಿಸಿದ್ದಾರೆ.

ಕಳೆದ ತಿಂಗಳು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ದಸರಾಕ್ಕೆ ಅನುದಾನ ನೀಡುವಂತೆ ಕೋರಿ ಮನವಿ ಪತ್ರ ಸಲ್ಲಿಸುವಾಗ ಮುಖ್ಯಮಂತ್ರಿಗಳು ನಿರ್ಲಕ್ಷö್ಯದ ಮಾತುಗಳನ್ನಾಡಿದ್ದಾರೆ. ಆ ಸಂದರ್ಭವೇ ಜಿಲ್ಲೆಯ ಶಾಸಕರುಗಳು ಹಾಗೂ ಬಿಜೆಪಿ ಮಂದಿ ಎಚ್ಚೆತ್ತುಕೊಂಡಿದ್ದರೆ ಮಳೆಹಾನಿ ಪರಿಹಾರ ಕೊಡಗಿಗೆ ಕೂಡ ಬಿಡುಗಡೆಯಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಮಳೆಹಾನಿ ಪರಿಹಾರವಾಗಿ ಹೆಚ್ಚಿನ ಅನುದಾನವನ್ನು ಜಿಲ್ಲೆಗೆ ಬಿಡುಗಡೆ ಮಾಡದಿದ್ದರೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಜಿಲ್ಲಾ ವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಉಸ್ಮಾನ್ ಹೇಳಿದ್ದಾರೆ.