*ಗೋಣಿಕೊಪ್ಪ, ಆ. ೮: ಉದ್ಯೋಗಸ್ಥ ಮಹಿಳೆಯರ ಚಿಕ್ಕ ಮಕ್ಕಳ ಪಾಲನೆಗೆ ಶಿಶುಪಾಲನಾ ಕೇಂದ್ರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತೆರೆದಿದ್ದು, ಪೊನ್ನಂಪೇಟೆ ತಾಲೂಕಿನ ಮೊದಲ ಕೇಂದ್ರ ಆರಂಭಕ್ಕೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದ್ದಾರೆ. ಪೊನ್ನಂಪೇಟೆ ಮುತ್ತಪ್ಪ ದೇವಸ್ಥಾನದ ಸಮೀಪದಲ್ಲಿ ‘ಡೇ ಕೇರ್’ ಮಾದರಿಯ ಶಿಶುಪಾಲನಾ ಕೇಂದ್ರ ಸಣ್ಣ ಅಂಗನವಾಡಿಯ ಸ್ವರೂಪದಲ್ಲಿ ಮಕ್ಕಳ ಪಾಲನೆ ಹಾಗೂ ಕಲಿಕೆಗೆ ಪೂರಕವಾದ ವಾತಾವರಣದಲ್ಲಿ ನಡೆಯಲಿದೆ.

ಶಿಶುಪಾಲನ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಸರ್ಕಾರಿ ನೌಕರರ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಶಿಶುಪಾಲನಾ ಕೇಂದ್ರಗಳನ್ನು ೨೦೨೧ರಲ್ಲಿ ರೂಪಿಸಲಾಯಿತು. ಸರ್ಕಾರಿ ನೌಕರರು ಹೆಚ್ಚಾಗಿರುವ ಸ್ಥಳವನ್ನೇ ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಇತ್ತೀಚೆಗೆ ಸರ್ಕಾರ ಇದರ ರೂಪುರೇಷೆ ಬದಲಿಸಿದ್ದು, ಖಾಸಗಿ ಕಂಪನಿ ಸಿಬ್ಬಂದಿ ಹಾಗೂ ದುಡಿಯುವ ಮಹಿಳೆಯರ ಮಕ್ಕಳಿಗೂ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಪೋಷಣೆ ಹಾಗೂ ಆರೋಗ್ಯದ ಸ್ಥಿತಿ ಸುಧಾರಿಸುವುದು, ಮಕ್ಕಳ ದೈಹಿಕ ಅರಿವಿನ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಯನ್ನು ಉತ್ತೇಜಿಸುವ ಕಾರ್ಯಚಟುವಟಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ರಾಜೇಶ್ ಮಾತನಾಡಿ, ಪ್ರಥಮವಾಗಿ ಪ್ರಾರಂಭಿಸಲಾದ ಕೇಂದ್ರದಲ್ಲಿ ೮ ತಿಂಗಳಿAದ ೬ ವರ್ಷದವರೆಗಿನ ೯ ಮಕ್ಕಳಿದ್ದಾರೆ. ನಿತ್ಯ ಬೆಳಿಗ್ಗೆ ೯ರಿಂದ ಸಂಜೆ ೬ವರೆಗೆ ಇದು ಕಾರ್ಯನಿರ್ವಹಿಸುತ್ತದೆ. ಹಾಲು, ಊಟವನ್ನು ಮಕ್ಕಳಿಗೆ ನೀಡಲಾಗುತ್ತದೆ. ತಾಲೂಕು ಶ್ರೀಶಕ್ತಿ ಸಂಘ ಇದರ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಒಬ್ಬ ಶಿಕ್ಷಕಿ ಹಾಗೂ ಇಬ್ಬರು ಸಹಾಯಕಿಯರು ಇದ್ದಾರೆ ಎಂದು ತಿಳಿಸಿದರು.

ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ಸದಾ, ಶ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷ ರಜಿನಿ, ಕಾರ್ಯದರ್ಶಿ ರತ್ನ, ಕೇಂದ್ರ ಪ್ರಾರಂಭಕ್ಕೆ ಕೊಠಡಿ ಒದಗಿಸಿದ ಕಾಳಿಮಾಡ ಕಾರ್ಯಪ್ಪ ದಂಪತಿ ಹಾಗೂ ಅಂಗನವಾಡಿ ಶಿಕ್ಷಕಿಯರು, ಶ್ರೀಶಕ್ತಿ ಸಂಘದ ಪದಾಧಿಕಾರಿಗಳು ಇದ್ದರು.