ಕುಶಾಲನಗರ, ಆ. ೯: ಕುಶಾಲನಗರ ಶ್ರೀ ಭಗೀರಥ ಉಪ್ಪಾರ ಯುವಕ ಸಂಘ ಮತ್ತು ಶ್ರೀ ಆದಿಶಕ್ತಿ ಅಂತರಘಟ್ಟೆಯಮ್ಮ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಶ್ರೀ ಮಹರ್ಷಿ ಭಗೀರಥ ಜಯಂತ್ಯೋತ್ಸವ ನಡೆಯಿತು.
ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಕೆ. ಗಿರೀಶ್ ಉಪ್ಪಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮುದಾಯ ಬಾಂಧವರು ರಾಜಕೀಯವಾಗಿ ಸಾಧನೆ ತೋರುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕುಶಾಲನಗರದಲ್ಲಿ ಸಮುದಾಯ ಬಾಂಧವರಿಗೆ ಸಮುದಾಯ ಭವನ ನಿರ್ಮಾಣಕ್ಕೆ ಸರಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಶಾಸಕರು, ಸಂಸದರ ನಿಧಿಯಿಂದ ೩೫ ಲಕ್ಷ ರೂ ಸೇರಿದಂತೆ ಅಗತ್ಯ ಅನುದಾನ ಒದಗಿಸುವ ಭರವಸೆ ವ್ಯಕ್ತಪಡಿಸಿದರು.
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಹೆಚ್ಚುವರಿ ಆಯುಕ್ತ ಡಿ. ಜಗನ್ನಾಥ್ ಸಾಗರ್ ಮುಖ್ಯ ಭಾಷಣ ಮಾಡಿ, ಸಮುದಾಯ ಬಾಂಧವರು ಶಿಕ್ಷಣಕ್ಕೆ ಒತ್ತು ನೀಡಿ ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕರೆ ನೀಡಿದರು.
ಕೊಡಗು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಉಪ್ಪಾರ ಜನಾಂಗ ಸಂಘಟಿತರಾಗಬೇಕಿದೆ ಎಂದು ಕರೆ ನೀಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಪ.ಪಂ. ಅಧ್ಯಕ್ಷ ಬಿ. ಜಯವರ್ಧನ್ ಮಾತನಾಡಿ, ಕುಶಾಲನಗರದಲ್ಲಿ ಉಪ್ಪಾರ ಸಂಘಕ್ಕೆ ಅಗತ್ಯ ಸಹಕಾರವನ್ನು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಮೂಲಕ ನೀಡಲಾಗುವುದು ಎಂದರು.
(ಮೊದಲ ಪುಟದಿಂದ) ಸಂಘದ ಅಧ್ಯಕ್ಷ ಕೆ.ಎಸ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಪ್ಪಾರ ನೌಕರರ ವೃತ್ತಿಪರರ ಸಂಘದ ಅಧ್ಯಕ್ಷ ಜವರ ಶೆಟ್ಟಿ, ಉಪಾಧ್ಯಕ್ಷ ಶಿವು, ಪಿರಿಯಾಪಟ್ಟಣದ ಅಧ್ಯಕ್ಷ ಪಿ.ಎಲ್. ರಾಮಣ್ಣ, ಪಿಡಿಒ ಮಂಜುನಾಥ್, ಮಡಿಕೇರಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಕಳಸೇಗೌಡ, ಮೈಸೂರು-ಚಾಮರಾಜನಗರ ಸಂಘದ ವಿಷಕಂಠಯ್ಯ, ಉಪ್ಪಾರ ಯುವಕ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಸಿ. ಗೋವಿಂದರಾಜು, ಗೌರವಾಧ್ಯಕ್ಷ ಬಿ.ಎಸ್. ಪರಮೇಶ್ ಸಾಗರ್, ಆದಿಶಕ್ತಿ ಅಂತರಘಟ್ಟೆಯಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಸಂಜೀವ, ಯುವಕ ಸಂಘದ ಉಪಾಧ್ಯಕ್ಷ ಬಿ.ವಿ. ಗಿರೀಶ್, ಕಾರ್ಯದರ್ಶಿ ಬಿ.ಎನ್. ಜಗದೀಶ್, ಖಜಾಂಚಿ ಗಜೇಂದ್ರ ಮತ್ತಿತರ ಪ್ರಮುಖರು ಇದ್ದರು.
ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮುನ್ನ ಸಮುದಾಯ ಬಾಂಧವರು ಬೈಚನಹಳ್ಳಿ ಆದಿಶಕ್ತಿ ಅಂತರಘಟ್ಟೆಯಮ್ಮ ದೇವಾಲಯದಿಂದ ಕಲಶ ಹೊತ್ತು ಸಭಾಂಗಣದವರೆಗೆ ಭಗೀರಥ ಭಾವಚಿತ್ರವನ್ನು ಮೆರವಣಿಗೆ ನಡೆಸಿದರು. ಸಭಾಂಗಣದಲ್ಲಿ ಭಗೀರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.