ಸಿದ್ದಾಪುರ, ಆ. ೯: ನಿರಂತರ ಕಾಡಾನೆಗಳ ಹಾವಳಿಯಿಂದ ಆತಂಕದ ದಿನಗಳನ್ನು ಕಳೆಯುತ್ತಿದ್ದ ನೆಲ್ಲಿಹುದಿಕೇರಿಯ ಮಂದಿಗೆ ಇಂದು ಎದುರಾದ ಒಂಟಿ ಸಲಗದ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಸುಮಾರು ೮೦೦ಕ್ಕೂ ಅಧಿಕ ಮನೆಗಳಿರುವ ನೆಲ್ಲಿಹುದಿಕೇರಿಯ ಎಂ.ಜಿ. ಕಾಲೋನಿಯಲ್ಲಿ ಒಂಟಿ ಸಲಗವೊಂದು ದಿಢೀರ್ ಪ್ರತ್ಯಕ್ಷವಾಯಿತು. ಕಾಡಾನೆ ಬಂತೆAದು ಎಲ್ಲರೂ ಭಯದಿಂದ ಓಡಿದರೆ ಆ ಆನೆ ಯಾವುದೇ ಪ್ರತಿರೋಧವನ್ನು ವ್ಯಕ್ತಪಡಿಸದೆ ಎಲ್ಲರ ಮನೆ ಮನೆಗಳ ಬಳಿಗೆ ತೆರಳಿ ಘೀಳಿಡುತ್ತಿತ್ತು. ಪಕ್ಕದಲ್ಲೇ ಆಟೋರಿಕ್ಷವೊಂದು ನಿಂತಿದ್ದರೂ ಯಾವುದೇ ಹಾನಿ ಮಾಡದೆ ಅದರ ಪಕ್ಕದಲ್ಲೇ ಸಾಗಿದ ಆನೆ ಮೊಬೈಲ್‌ನಲ್ಲಿ ವೀಡಿಯೋ ಮಾಡುತ್ತಿದ್ದವರ ಬಳಿ ಧಾವಿಸಿತು. ಈ ಸಂದರ್ಭ ಜನರು ಬೊಬ್ಬಿಟ್ಟಾಗ ಗಾಬರಿಯಾದ ಆನೆ ಯಾವ ಕಡೆ ಓಡಬೇಕೆಂದು ತಿಳಿಯದೆ ಕೆಲವು ಮನೆಗಳ ಆವರಣಕ್ಕೆ ನುಗ್ಗಿತು.

ಆದರೆ ಆಶ್ಚರ್ಯವೆಂದರೆ ಯಾವುದೇ ಮಾನವ ಹಾನಿ ಅಥವಾ ವಸ್ತುಗಳಿಗೆ ಹಾನಿ ಮಾಡಲಿಲ್ಲ. ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಮಾಹಿತಿ ಸಿಕ್ಕಿದ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ನೇತೃತ್ವದ

(ಮೊದಲ ಪುಟದಿಂದ) ತಂಡ ಸ್ಥಳಕ್ಕೆ ಬಂದು ಆನೆಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾದರು. ಬೆಟ್ಟದಕಾಡು ಭಾಗದಿಂದ ಈ ಆನೆ ಬಂದಿರಬಹುದೆAದು ಅಂದಾಜಿಸಲಾಗಿದ್ದು, ಕಾಲಿನಲ್ಲಿ ಗಾಯವಾಗಿರುವುದು ಗೋಚರಿಸಿದೆ.

ಕಾಡಾನೆಯಂತೆ ವರ್ತಿಸದ ಈ ಆನೆಯ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿ ಮುರಳಿ ಮನೋಹರ್, ಇದು ಸಾಕಾನೆಯಂತೆ ಕಂಡು ಬಂದಿದೆ, ಯಾರೋ ತಂದು ಬಿಟ್ಟಿರುವ ಬಗ್ಗೆ ಅನುಮಾನವಿದೆ. ಇದನ್ನು ಅರಣ್ಯ ಅಧಿಕಾರಿಗಳೇ ಖಾತ್ರಿಪಡಿಸಿ ಸಾಕಾನೆ ಶಿಬಿರಕ್ಕೆ ಸ್ಥಳಾಂತರಗೊಳಿಸಬೇಕೆAದು ಒತ್ತಾಯಿಸಿದ್ದಾರೆ. -ಅಂಚೆಮನೆ ಸುಧಿ