*ಗೋಣಿಕೊಪ್ಪ, ಆ. ೮: ಪೊನ್ನಂಪೇಟೆ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬೃಹತ್ ವಾಹನ ಜಾಥಾದಲ್ಲಿ ೩೦೦ ಕ್ಕೂ ಹೆಚ್ಚು ವಾಹನಗಳು ಪಾಲ್ಗೊಳ್ಳುವ ಮೂಲಕ ಅಖಂಡ ಭಾರತ ಸಂದೇಶ ಸಾರಿತು.

ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಹೊರಟ ಮೆರವಣಿಗೆ ಬೈಪಾಸ್ ರಸ್ತೆ ಮೂಲಕ ಪೊನ್ನಂಪೇಟೆಗೆ ತೆರಳಿತು. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಪಾಲ್ಗೊಂಡು ಗಮನ ಸೆಳೆದವು. ಸವಾರರು ಅಬ್ಬರದ ಮಳೆಯಲ್ಲೂ ಕೂಡ ಬೈಕ್ ಚಾಲಿಸಿ ಗಮನ ಸೆಳೆದರು. ಕೇಸರಿ ಧ್ವಜ ಹಿಡಿದು ಅಖಂಡ ಭಾರತ ಎಂಬ ಘೋಷಣೆಯೊಂದಿಗೆ ಭಾಗವಹಿಸಿದರು. ಮಳೆಯ ಪ್ರಮಾಣ ಹೆಚ್ಚಾದರೂ ಕೂಡ ಜಾಥಾ ಸಂಪನ್ನಗೊಳಿಸಿದರು.

ಜಾಥಾ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಸಮಾಗಮಗೊಂಡಿತು. ಹಿರಿಯ ಕಾರ್ಯಕರ್ತೆ ಯಮುನಾ ಚಂಗಪ್ಪ ಕೇಸರಿ ಧ್ವಜ ಆರೋಹಣದ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ನವೀನ್ ಕಿರುಗೂರು ವಂದೇ ಮಾತರಂ ಗೀತೆ ಪ್ರಸ್ತುತ ಪಡಿಸಿದರು.

ಭರತ ಭೂಮಿ ಯಾವತ್ತೂ ಕೂಡ ಸ್ವಾತಂತ್ರö್ಯವನ್ನು ಕಳೆದುಕೊಂಡಿಲ್ಲ ಎಂದು ಹಿಂದು ಜಾಗರಣ ವೇದಿಕೆ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ದಿಕ್ಸೂಚಿ ಭಾಷಣದಲ್ಲಿ ಹೇಳಿದರು. ಭಾರತಾಂಬೆ ಮಣ್ಣಿನ ರಕ್ಷಣೆಗೆ ಪುರುಷರು ಮಾತ್ರವಲ್ಲದೆ, ಮಹಿಳೆಯರು, ಹಸುಳೆಗಳು ಕೂಡ ಒಂದಲ್ಲ ಒಂದು ರೀತಿಯಲ್ಲಿ ಅರ್ಪಿಸಿಕೊಂಡಿದ್ದಾರೆ. ಕ್ರಿ. ಪೂ.ದಲ್ಲಿ ಕೂಡ ಸಾಕಷ್ಟು ಇಸ್ಲಾಮೀಕರಣದ ದಾಳಿ ನಡೆದರೂ ಭಾರತಾಂಬೆಗಾಗಿ ಪ್ರತಿ ಹೋರಾಟ ಮೂಲಕ ದೇಶವನ್ನು ರಕ್ಷಿಸಿಕೊಂಡಿದ್ದೇವೆ. ಕೆಲವೊಂದು ರಾಜಕೀಯ ಪುಡಾರಿಗಳಿಂದ ದೇಶ ಸ್ವಾತಂತ್ರö್ಯವನ್ನು ಕಳೆದುಕೊಳ್ಳಲು ಕಾರಣವಾಗಿರಬಹುದು. ದೇಶ ಎಂದೂ ಕೂಡ ತಲೆ ಬಾಗಿಲ್ಲ ಎಂದು ಅಭಿಪ್ರಾಯಪಟ್ಟರು. ಹಿಂದು ಸಮಾಜ ಹೀಗೆ ಮುಂದುವರಿಯಬೇಕಿದೆ. ೨೦೪೭ ರಲ್ಲಿ ಭಾರತ ದೇಶವನ್ನು ಇಸ್ಲಾಮೀಕರಣವಾಗಿಸಬೇಕೆಂಬ ದುರುದ್ದೇಶ ಈಡೇರುವುದಿಲ್ಲ. ಬಾಂಗ್ಲಾದೇಶದಲ್ಲಿ ತುತ್ತು ಅನ್ನಕ್ಕೂ ಸಂಕಷ್ಟ ಎದುರಾಗಿದೆ. ಪಾಕಿಸ್ಥಾನದಲ್ಲಿ ವಂದೇ ಮಾತರಂ ಗೀತೆ ಕೂಡ ಮೊಳಗುವಂತಾಗಿದೆ. ಅಗ್ನಿ ವೀರರಿಂದ ಗ್ರಾಮ, ಗ್ರಾಮ ಮಟ್ಟದಲ್ಲೂ ಭಾರತಾಂಬೆ ರಕ್ಷಣೆ ಸಾಗಲಿದೆ. ಈಗಾಗಲೇ ಯೋಗದಿಂದ ವಿಶ್ವ ಗುರು ಎಂದು ಗುರುತಿಸಿಕೊಂಡಿರುವ ಭಾರತ, ಹೀಗೆ ಮುಂದುವರಿಯಲಿದೆ ಎಂದರು.

ಆರ್‌ಎಸ್‌ಎಸ್ ಸಂಘ ಚಾಲಕ್ ಚೆಕ್ಕೇರ ಮನು ಕಾವೇರಪ್ಪ, ಮಾಜಿ ಸೈನಿಕ ಐನಂಡ ಕೆ. ಮಂದಣ್ಣ, ಜಿಲ್ಲಾ ಸಮಿತಿ ಸದಸ್ಯ ಆಲೆಮಾಡ ಜೋಯಪ್ಪ, ತಾಲೂಕು ಸಂಯೋಜಕ ಅಲ್ಲುಮಾಡ ಶರತ್ ಪೆಮ್ಮಯ್ಯ ಇದ್ದರು.