ಸೋಮವಾರಪೇಟೆ,ಆ.೮: ಜಿಲ್ಲೆಯಲ್ಲಿ ಮಳೆಯಿಂದಾಗಿ ಹೆಚ್ಚಿನ ಹಾನಿ ಸಂಭವಿಸುತ್ತಿದೆ. ಖಾಸಗಿಯೊಂದಿಗೆ ಸಾರ್ವಜನಿಕ ಆಸ್ತಿ ಪಾಸ್ತಿಯೂ ಹಾನಿಗೀಡಾಗಿವೆ. ಈಗಾಗಲೇ ಪ್ರಥಮ ಹಂತದಲ್ಲಿ ೧೦೦ ಕೋಟಿ ಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಕೊಡಗಿಗೆ ವಿಶೇಷ ಅನುದಾನ ಕೋರಿ ಜಿಲ್ಲೆಯ ಶಾಸಕರನ್ನು ಒಳಗೊಂಡ ನಿಯೋಗ ಸದ್ಯದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.

ಭಾರೀ ಮಳೆಯಿಂದ ಹಾನಿಗೀಡಾದ ಮನೆಗಳನ್ನು ವೀಕ್ಷಿಸಿ ಸ್ಥಳದಲ್ಲಿಯೇ ಸಂತ್ರಸ್ತರಿಗೆ ಪರಿಹಾರ ವಿತರಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಮಳೆಹಾನಿಯಿಂದಾಗಿ ಭಾರೀ ನಷ್ಟ ಸಂಭವಿಸಿದೆ. ಸರ್ಕಾರವೂ ಸಹ ತ್ವರಿತಗತಿಯಲ್ಲಿ ಸ್ಪಂದನೆ ನೀಡುತ್ತಿದೆ. ಸಾರ್ವಜನಿಕರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿದ್ದು, ಗರಿಷ್ಠ ಪ್ರಮಾಣದ ಪರಿಹಾರ ಒದಗಿಸುತ್ತಿದೆ ಎಂದು ಹೇಳಿದರು.

ಈಗಾಗಲೇ ಸರ್ಕಾರಿ ಆಸ್ತಿ ಪಾಸ್ತಿ ಹಾನಿಗೆ ಸಂಬAಧಿಸಿದAತೆ ವರದಿ ತಯಾರಿಸಲಾಗುತ್ತಿದೆ. ಪ್ರಥಮ ಹಂತದಲ್ಲಿ ೧೦೦ ಕೋಟಿ ನಷ್ಟವಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಹಾನಿಯ ಬಗ್ಗೆ ಪ್ರತಿ ದಿನ ವರದಿ ತರಿಸಿಕೊಳ್ಳಲಾಗು ತ್ತಿದೆ. ಕೊಡಗಿಗೆ ವಿಶೇಷ ಅನುದಾನ ಕಲ್ಪಿಸುವ ಸಂಬAಧ ಜಿಲ್ಲೆಯ ಶಾಸಕರನ್ನು ಒಳಗೊಂಡ ನಿಯೋಗ ಸದ್ಯದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕರು ಹೇಳಿದರು.

ಕೊಡಗಿಗೆ ಸರ್ಕಾರ ಮಳೆಹಾನಿ ಪರಿಹಾರ ಹಣ ಬಿಡುಗಡೆ ಮಾಡಿಲ್ಲ ಎಂದು ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಈಗಾಗಲೇ ೩೫ ಕೋಟಿ ಅನುದಾನ ಲಭ್ಯವಿದೆ. ರಾಜಕೀಯ ಕಾರಣಕ್ಕಾಗಿ ಇಂತಹ ಅಪಪ್ರಚಾರ ನಡೆಯುತ್ತಿದೆ. ಈ ಹಿಂದೆ ಕಾಫಿ ಬೆಳೆ ಹಾನಿಯಾದಾಗ ಬೇರೆ ಸರ್ಕಾರ ಎಷ್ಟು ಪರಿಹಾರ ಕೊಟ್ಟಿದೆ? ಎಂಬುದನ್ನು ಪ್ರಶ್ನಿಸಿಕೊಳ್ಳಲಿ ಎಂದು ರಂಜನ್ ಅಭಿಪ್ರಾಯಿಸಿದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ೧೦೦೦ ರೂಪಾಯಿ ಪರಿಹಾರ ಚೆಕ್ ಕೊಟ್ಟಿದ್ದು, ಅದೂ ಕೂಡ ಬೌನ್ಸ್ ಆಗಿತ್ತು. ಈ ಬಗ್ಗೆ ವಿಧಾನ ಸಭೆಯಲ್ಲೂ ಪ್ರಸ್ತಾಪ ಮಾಡಿದ್ದೆವು. ನಮ್ಮ ಸರ್ಕಾರ ಪರಿಹಾರಕ್ಕೆ ತಾರತಮ್ಯ ಮಾಡುತ್ತಿಲ್ಲ ಎಂದರು. ಈ ಹಿಂದೆ ಮುಖ್ಯಮಂತ್ರಿ ಯಾಗಿದ್ದ ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಕೊಡಗಿಗೆ ೨ ಬಾರಿ ಪರಿಹಾರ ಮಂಜೂರು ಮಾಡಿದೆ. ಪ್ರಥಮ ಹಂತದಲ್ಲಿ ೪೩ ಕೋಟಿ ಹಾಗೂ ಎರಡನೇ ಹಂತದಲ್ಲಿ ೬೬ ಕೋಟಿ ಪರಿಹಾರ ವಿತರಿಸಿದ್ದು, ಸಣ್ಣ ಬೆಳೆಗಾರರಿಗೆ ಸರ್ಕಾರ ನೆರವಾಗಿದೆ ಎಂದು ರಂಜನ್ ತಿಳಿಸಿದರು.

ಮಳೆ ಹಾನಿ ಪರಿಹಾರ ವಿತರಣೆ ಸಂಬAಧ ಕಂದಾಯ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ. ೧೨ ಗಂಟೆಯೊಳಗೆ ಮನೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಸ್ಥಳದಲ್ಲೇ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಸರ್ಕಾರ ಜಿಲ್ಲೆಯ ಜನರ ಹಿತ ಕಾಯಲು ಬದ್ಧವಾಗಿದೆ. ಜನರು ಧೃತಿಗೆಡುವ ಅವಶ್ಯಕತೆಯಿಲ್ಲ. ಗರಿಷ್ಠ ಪ್ರಮಾಣದ ಪರಿಹಾರ ನೀಡುತ್ತಿದ್ದೇವೆ ಎಂದು ಶಾಸಕರು ಹೇಳಿದರು. ಮಳೆಯಿಂದ ಮನೆ ಕಳೆದುಕೊಂಡ ಬಜೆಗುಂಡಿ, ಬೇಳೂರು, ವಲ್ಲಭಬಾಯಿ ರಸ್ತೆ, ಬಸವೇಶ್ವರ ರಸ್ತೆ, ಆಲೇಕಟ್ಟೆ, ಬಾಣಾವರ ರಸ್ತೆ, ಹಾನಗಲ್ಲು ಗ್ರಾಮದ ಸಂತ್ರಸ್ತರಿಗೆ ಶಾಸಕರು ಪರಿಹಾರ ಧನದ ಚೆಕ್ ವಿತರಿಸಿದರು.

ಈ ಸಂದರ್ಭ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಬೇಳೂರು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್, ಚೌಡ್ಲು ಗ್ರಾ.ಪಂ. ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಮುಖ್ಯಾಧಿಕಾರಿ ನಾಚಪ್ಪ, ಕಂದಾಯ ಇಲಾಖಾಧಿಕಾರಿಗಳು, ಗ್ರಾ.ಪಂ. ಸದಸ್ಯರುಗಳು, ಅಭಿವೃದ್ಧಿ ಅಧಿಕಾರಿಗಳು, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.