ಸಿದ್ದಾಪುರ, ಆ. ೮: ನೆಲ್ಯಹುದಿಕೇರಿ ಗ್ರಾಮದಲ್ಲಿ ಹಾಡುಹಗಲೇ ಕಾಡಾನೆಗಳು ರಾಜಾರೋಷವಾಗಿ ಸುತ್ತಾಡುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಸಿಲುಕಿಕೊಂಡಿದ್ದಾರೆ. ಸೋಮವಾರದಂದು ಮಧ್ಯಾಹ್ನದ ಸಮಯದಲ್ಲಿ ಕಾಡಾನೆಗಳು ನೆಲ್ಯಹುದಿಕೇರಿಯ ಭಾಗದ ಶ್ರೀ ಸತ್ಯನಾರಾಯಣ ದೇವಾಲಯದ ರಸ್ತೆ ಹಾಗೂ ಬೆಟ್ಟದಕಾಡುವಿನ ಎಂ.ಜಿ ಕಾಲೋನಿಯ ಜನವಸತಿ ಪ್ರದೇಶಗಳಲ್ಲಿ ಕಂಡು ಬಂದಿದೆ. ಶ್ರೀ ಸತ್ಯನಾರಾಯಣ ದೇವಾಲಯದ ಬಳಿ ಕಾಲು ನೋವಿನಿಂದ ಬಳಲುತ್ತಿರುವ ಕಾಡಾನೆಯೊಂದನ್ನು ಕಂಡು ಅಲ್ಲಿನ ನಿವಾಸಿಗಳು ಭಯದಿಂದ ಓಡಿದ ಘಟನೆ ಕೂಡ ನಡೆದಿದೆ. ಕಾಡಾನೆ ಧಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ನೆಲ್ಯಹುದಿಕೇರಿ ವಿ.ಎಸ್.ಎಸ್.ಎನ್ ಸಿಬ್ಬಂದಿ ಹರ್ಷ ಸೇರಿದಂತೆ ಕೆಲವರು ಕೂದಲೆಳೆಯ ಅಂತರದಿAದ ಪಾರಾದ ಘಟನೆ ನಡೆದಿದೆ. ಮಿತಿಮೀರಿದ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರಿಗೆ, ಬೆಳೆಗಾರರಿಗೆ, ಕಾರ್ಮಿಕರಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.
-ವಾಸು.