ಸುಂಟಿಕೊಪ್ಪ, ಆ. ೮: ಐಗೂರು ಸುತ್ತ ಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಯಿಂದ ಕೃಷಿಕರು ನೆಟ್ಟು ಬೆಳೆಸಿದ ಪೈರುಗಳು ನಾಶವಾಗುತ್ತಿದ್ದು ಕೃಷಿಕರ ಬದುಕು ಹೈರಾಣಾಗಿದೆ. ಒಂಟಿ ಸಲಗ ಹಾಗೂ ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ಲಗ್ಗೆಯಿಡುತ್ತಿದ್ದು ತೆಂಗು, ಬಾಳೆ, ಮರಗೆಣಸು, ಗಿಡಗಳನ್ನು ಕಿತ್ತು ತಿಂದು ಕಾಫಿ ಗಿಡಗಳ ರೆಂಬೆಗಳನ್ನು ಮುರಿದು ಹಾಕುತ್ತಿರುವುದರಿಂದ ಕೃಷಿಕರು ಬೆಳೆದ ಬೆಳೆ ಕೈಗೆಟುಕದಂತಾಗಿದೆ. ರಾತ್ರಿ ವೇಳೆ ಐಗೂರು, ಎಡವಾರೆ, ಕಾಜೂರು, ಯಡವನಾಡು ವಿಭಾಗದಲ್ಲಿ ಕಾಡಾನೆಗಳ ಉಪಟಳ ಹೇಳತೀರದಾಗಿದೆ. ಐಗೂರಿನ ಪೊನ್ನಚ್ಚನ ಸೋಮಯ್ಯ, ಸುವೀಸ್ ಕೃಪಾನ್, ಡಿ.ಎಂ.ನಾಗೇAದ್ರ, ಡಿ.ಎಸ್.ಚೆಂಗಪ್ಪ, ಜಿ.ಕೆ.ಬಾಲಕೃಷ್ಣ, ರಾಮಣ್ಣ ಇವರುಗಳ ತೋಟಕ್ಕೆ ಪ್ರತಿನಿತ್ಯ ಒಂಟಿ ಸಲಗ ನುಗ್ಗಿ ಮರಗೆಣಸು ಗಿಡಗಳನ್ನು ತಿಂದು ನಾಶಪಡಿಸುತ್ತಿದೆ. ಐಗೂರು ಯಡವನಾಡು ಯಡವಾರೆ ಕಾಜೂರು ವಿಭಾಗದ ಬೆಳೆಗಾರರು ಹಲವಾರು ಬಾರಿ ಕಾಡಾನೆ ದಾಳಿಯಿಂದ ಬೆಳೆ ನಾಶವಾಗುತ್ತಿರುವ ಬಗ್ಗೆ ಅರಣ್ಯ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗುತ್ತಿಲ್ಲ.