ಸಿದ್ದಾಪುರ, ಆ. ೯: ನೆಲ್ಲಿಹುದಿಕೇರಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ. ಬೆಟ್ಟದ ಕಾಡುವಿನಲ್ಲಿ ಹಾಗೂ ಶ್ರೀ ಸತ್ಯನಾರಾಯಣ ದೇವಾಲಯದ ಬಳಿ ಇರುವ ಟಿ.ಪಿ. ನಂಜಪ್ಪ ಎಂಬವರಿಗೆ ಸೇರಿದ ಕಾಫಿ ತೋಟದೊಳಗೆ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸಿವೆ. ಕಾಫಿ, ಅಡಿಕೆ, ಬಾಳೆ ಫಸಲಿರುವ ಗಿಡ ಮರಗಳನ್ನು ಎಳೆದು ಹಾಕಿ ಧ್ವಂಸಗೊಳಿಸಿವೆೆ. ಕೃಷಿ ಫಸಲುಗಳು ನಾಶವಾಗಿರುವುದನ್ನು ನೋಡಲು ಹೋದಾಗ ಹಾಡುಹಗಲೇ ಕಾಡಾನೆಯು ನಂಜಪ್ಪ ಅವರ ಮೇಲೆ ಧಾಳಿಗೆ ಮುಂದಾಗಿದ್ದು, ಕೂದಲೆಳೆಯ ಅಂತರದಿAದ ಪಾರಾಗಿದ್ದಾರೆ.

ಕಾಡಾನೆಗಳ ಉಪಟಳದಿಂದಾಗಿ ಲಕ್ಷಾಂತರ ರೂಪಾಯಿಯ ಕೃಷಿ ಫಸಲುಗಳು, ಬೆಳೆಗಳು ನಾಶಗೊಂಡಿದ್ದು, ಕಾಡಾನೆಗಳ ಹಾವಳಿಯಿಂದ ಜೀವನ ದುಸ್ತರವಾಗಿದೆ ಎಂದು ನಂಜಪ್ಪ ಅಳಲು ತೋಡಿಕೊಂಡರು. ಮಿತಿಮೀರಿದ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಿ ನಷ್ಟಕ್ಕೊಳಗಾದ ರೈತರಿಗೆ ಕೂಡಲೇ ಅರಣ್ಯ ಇಲಾಖೆ ವತಿಯಿಂದ ಪರಿಹಾರ ನೀಡಬೇಕೆಂದರು.