ಮಡಿಕೇರಿ, ಆ. ೭: ಎಲ್ಲಿಯೋ ಮಂಜೂರಾದ ಜಾಗದ ನಿವೇಶನಕ್ಕೆ ಬದಲಾಗಿ ವಿದ್ಯಾನಗರದಲ್ಲಿ ಚೆನ್ನಾಗಿರುವ ಸಮತಟ್ಟಾದ ಜಾಗಕ್ಕೆ ಬೇಲಿ ಹಾಕಿಕೊಂಡಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದೀಗ ಇನ್ನಷ್ಟು ಬೆಲೆಬಾಳುವ ಜಾಗಕ್ಕೆ ಮತ್ತೊಂದು ಬೇಲಿ ಎದ್ದಿದೆ.., ಆಶ್ಚರ್ಯವೆಂದರೆ ಈ ಜಾಗಕ್ಕೆ ಬೇಲಿ ಹಾಕಿರುವದು ಸಮಾಜ ಸೇವೆಯ ಸೋಗಿನಲ್ಲಿರುವ ವ್ಯಕ್ತಿ..!

ಪತ್ನಿಯ ಹೆಸರಿನಲ್ಲಿ ಮನೆ ಹೊಂದಿಕೊAಡಿರುವ ಮರಿಸಿದ್ಧ ಎಂಬವರು ತಮಗೆ ಎಂದೋ., ಎಲ್ಲಿಗೋ ಮಂಜೂರಾಗಿರುವ ನಿವೇಶನ ಹಕ್ಕು ಪತ್ರದ ಆಧಾರದಲ್ಲಿ ವಿದ್ಯಾನಗರದ ಸಮತಟ್ಟಾದ ಜಾಗಕ್ಕೆ ಬೇಲಿ ಹಾಕಿಕೊಂಡಿದಲ್ಲದೆ ನಗರಸಭೆ ಕೆಲ ಅಧಿಕಾರಿಗಳ ಕೃಪಾಕಟಾಕ್ಷದಿಂದ ನಮೂನೆ-೩ ಅನ್ನು ಕೂಡ ಪಡೆದುಕೊಂಡಿದ್ದಾರೆ. ಇದರೊಂದಿಗೆ ಜೋಡುಪಾಲದ ಶಿವಕುಮಾರ್ ಎಂಬವರು ಕೂಡ ನಕಲಿ ದಾಖಲೆ ಮೂಲಕ ಜಾಗಕ್ಕೆ ಬೇಲಿ ಹಾಕಿಕೊಂಡು ನಮೂನೆ-೩ ಪಡೆದುಕೊಂಡಿದ್ದಾರೆ. ಈ ಅನಧಿಕೃತ ವ್ಯವಹಾರ ಸದ್ದು ಮಾಡುತ್ತಿರುವಾಗಲೇ ಮತ್ತೋರ್ವ ವ್ಯಕ್ತಿ ಇದೇ ಪ್ರದೇಶದಲ್ಲಿ ಸುಮಾರು ೨೫ ಸೆಂಟ್ ಜಾಗಕ್ಕೆ ಬೇಲಿ ಹಾಕಿಕೊಂಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ..!

ಜಾಗಕ್ಕೆ ಕೋಟಿ ಬೆಲೆ..!

ಮಡಿಕೇರಿ ನಗರಸಭಾ ವ್ಯಾಪ್ತಿಗೆ ಒಳಪಡುವ ವಾರ್ಡ್ ನಂ-೧ ಇದೀಗ ಭಾರೀ ಬೆಲೆ ಬಾಳುವ ಪ್ರದೇಶವಾಗಿದೆ. ಅದರಲ್ಲೂ ಒಂದೊಮ್ಮೆ ಹೌಸಿಂಗ್ ಬೋರ್ಡ್ನ ಕೆಲವೇ ಕೆಲವು ಮನೆಗಳಿದ್ದ ವಿದ್ಯಾನಗರ ಯಾರಿಗೂ ಬೇಡವಾಗಿತ್ತು. ಇದೀಗ ಜಿಲ್ಲಾ ಪಂಚಾಯಿತಿ ಭವನ, ನ್ಯಾಯಾಲಯ ಸಮುಚ್ಚಯ, ಕೇಂದ್ರೀಯ ವಿದ್ಯಾಲಯ, ಅನತಿ ದೂರದಲ್ಲಿ ರೆಸಾರ್ಟ್ಗಳು ನಿರ್ಮಾಣವಾದ ಬಳಿಕ ಇಲ್ಲಿನ ಜಾಗಕ್ಕೆ ಕೋಟಿ ಬೆಲೆ ಬಂದಿದೆ. ಈ ಹಿಂದೆ ಪುಟಾಣಿ ರೈಲು ಸಂಚರಿಸುತ್ತಿದ್ದ ಹತ್ತಾರು ಎಕರೆ ಜಾಗ ಹಾಗೆಯೇ ಪಾಳು ಬಿದ್ದಿತ್ತು. ನಗರದಿಂದ ದೂರವೆಂದು ಯಾರೂ ಅತ್ತ ಸುಳಿಯುತ್ತಿರಲಿಲ್ಲ., ಆದರೀಗ ವಿದ್ಯಾನಗರ ದುಬಾರಿಯಾಗಿದೆ. ಅಲ್ಲಿರುವ ಸರಕಾರೀ ಜಾಗವನ್ನು ರಕ್ಷಣೆ ಮಾಡುವದೇ ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿದೆ.