ಮಡಿಕೇರಿ, ಆ. ೭: ಕೊಡಗು ಜಿಲ್ಲೆಯಾದ್ಯಂತ ವಾಯು - ವರುಣನ ಅಬ್ಬರ ಮುಂದುವರಿಯುತ್ತಿದೆ. ವ್ಯಾಪಕ ಮಳೆಯಿಂದಾಗಿ ಅಲ್ಲಲ್ಲಿ ಆತಂಕದ ಸನ್ನಿವೇಶವೂ ಸೃಷ್ಟಿಯಾಗುತ್ತಿದೆ. ಕೆಲವು ಪ್ರದೇಶಗಳು ಅಪಾಯಕಾರಿ ಪರಿಸ್ಥಿತಿಯಲ್ಲಿರುವದರಿಂದ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಕೆಲವಾರು ಮಂದಿ ಆಶ್ರಯ ಪಡೆದಿದ್ದಾರೆ. ಪ್ರಸ್ತುತ ಕೊಯನಾಡು, ಊರುಬೈಲು, ಚೆಂಬು ಗ್ರಾಮದಲ್ಲಿ ಕಾಳಜಿಕೇಂದ್ರದಲ್ಲಿ ಜನರು ಆಶ್ರಯ ಪಡೆದಿದ್ದು, ಇವರಿಗೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ|| ಬಿ.ಸಿ. ಸತೀಶ ಅವರು ತಿಳಿಸಿದ್ದಾರೆ.

ನಾಪೋಕ್ಲು - ಭಾಗಮಂಡಲ ರಸ್ತೆ ಬೊಳಿಬಾಣಿ ರಸ್ತೆಯಲ್ಲಿ ನೀರು ನಿಂತು ಸಮಸ್ಯೆಯಾಗಿದೆ. ಬೆಟ್ಟಗೇರಿ - ನಾಪೋಕ್ಲು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದು, ಈ ಮಾರ್ಗದಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಲಘು ವಾಹನಗಳಿಗೆ ಮಾತ್ರ ಅವಕಾಶವಿದೆ. ತೋರ ಗ್ರಾಮದಲ್ಲೂ ಹಲವರನ್ನು ಸ್ಥಳಾಂತರಿಸಲಾಗಿದೆ. ಗೋಣಿಕೊಪ್ಪ ಭಾಗದಲ್ಲಿ ಕೀರೆಹೊಳೆಯೂ ಅಪಾಯದ ಮಟ್ಟದಲ್ಲಿದೆ. ಭಾಗಮಂಡಲ ತ್ರಿವೇಣಿ ಸಂಗಮ ಇನ್ನೂ ಜಲಾವೃತವಾಗಿದೆ.

ಕಾವೇರಿ- ಲಕ್ಷö್ಮಣ ತೀರ್ಥ ಸೇರಿದಂತೆ ಇತರ ನದಿ - ತೊರೆಗಳಲ್ಲೂ ನೀರಿನ ಮಟ್ಟದಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ನದಿತೀರದ ಪ್ರದೇಶದ ಜನರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಬಹುತೇಕ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಿದೆ. ಬರೆಕುಸಿತ, ಮರಬಿದ್ದು ಸಂಚಾರಕ್ಕೆ ಅಡಚಣೆಯಂತಹ ಘಟನೆಗಳೂ ಮುಂದುವರಿಯುತ್ತಿವೆ.

ಜಿಲ್ಲೆಯಲ್ಲಿ ಸರಾಸರಿ ೩.೨೧ ಇಂಚು

ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೩.೨೧ ಇಂಚಿನಷ್ಟು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೪.೬೦, ವೀರಾಜಪೇಟೆ ೨.೦೩ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೩ ಇಂಚು ಮಳೆ ಯಾಗಿದೆ. ಶಾಂತಳ್ಳಿ ಹೋಬಳಿಯಲ್ಲಿ ೭.೬೮ ಇಂಚು ಹಾಗೂ ಭಾಗಮಂಡಲ ಹೋಬಳಿಯಲ್ಲಿ ೬.೪೮ ಇಂಚಿನಷ್ಟು ಭಾರೀ ಮಳೆಯಾಗಿದೆ. ಉಳಿದಂತೆ ಮಡಿಕೇರಿ ೪.೩೬, ನಾಪೋಕ್ಲು ೩.೬೦, ಸಂಪಾಜೆಯಲ್ಲಿ ೪ ಇಂಚು ಮಳೆ ದಾಖಲಾಗಿದೆ.

ವೀರಾಜಪೇಟೆ ೨.೦೮, ಹುದಿಕೇರಿ ೨.೩೯, ಶ್ರೀಮಂಗಲ ೨.೮೦, ಪೊನ್ನಂಪೇಟೆ ೧.೭೨, ಅಮ್ಮತ್ತಿ ೧.೧೮, ಬಾಳೆಲೆಯಲ್ಲಿ ೨.೦೩ ಇಂಚು ಮಳೆಯಾಗಿದೆ. ಸೋಮವಾರಪೇಟೆ ೩.೮೨, ಶನಿವಾರಸಂತೆ ೧.೬೪, ಕೊಡ್ಲಿಪೇಟೆ ೨, ಕುಶಾಲನಗರ ೦.೮೯ ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ ೨೪ ಗಂಟೆಯಲ್ಲಿ ೨ ಇಂಚು ಮಳೆಯಾಗಿದೆ.

ಚೆಟ್ಟಳ್ಳಿ : ಮಾದಾಪುರದ ಕುಂಬಾರ ಬಾಣೆ ಹಾಗೂ ಹೊಸ ಬಡಾವಣೆಯ ಸುತ್ತಮುತ್ತಲಿನ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲಿಸಿದರು.ಚೆಟ್ಟಳ್ಳಿ: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಚೆಟ್ಟಳ್ಳಿ -ಮಡಿಕೇರಿ ಮುಖ್ಯ ರಸ್ತೆಯ ದೊಡ್ಡ ಅಭ್ಯಾಲದ ರಸ್ತೆಗೆ ಮಧ್ಯವಾಗಿ ಬರೆಕುಸಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿದೆ. ನಂತರ ತೆರವು ಕಾರ್ಯಾಚರಣೆ ನೆರವೇರಿತು.

ಕೂಡಿಗೆ: ಹಾರಂಗಿ ಅಣೆಕಟ್ಟೆಯಿಂದ ನದಿಗೆ ೨೦ ಸಾವಿರ ಕ್ಯೂಸೆಕ್ಸ್ ನೀರು ಹರಿಯಬಿಟ್ಟ ಪರಿಣಾಮ ಅಣೆಕಟ್ಟೆಯ ಮುಂಭಾಗದ ಸೇತುವೆ ಮುಳುಗಡೆಯಾಗಿದೆ. ಗುಡ್ಡೆಹೊಸೂರು - ಅತ್ತೂರು - ಹುದುಗೂರು ಮಾರ್ಗವಾಗಿ ಸೋಮವಾರಪೇಟೆಗೆ ತೆರಳುವ ರಸ್ತೆ ಸಂಚಾರ ಬಂದ್ ಆಗಿದೆ.

ಮಡಿಕೇರಿ : ಮೂರ್ನಾಡು ಪಟ್ಟಣದ ಮಾರುಕಟ್ಟೆ ಹಿಂಭಾಗದ ಶಾರದಾ ಎಂಬವರ ಮನೆಯ ಗೋಡೆ ಭಾರಿ ಮಳೆಗೆ ಕುಸಿತಗೊಂಡಿದೆ. ಹಲವು ಬಾರಿ ಈ ಬಗ್ಗೆ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಮನೆ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಮಳೆಗಾಲದಲ್ಲೂ ಮನೆಗೆ ಹಾನಿಯಾಗಿದ್ದು, ಶೀಟ್ ಗಳು ಹಾಗೂ ಮನೆಯ ಗೋಡೆ ಹಾನಿಯಾಗಿತ್ತು. ಈ ಬಾರಿ ಮನೆಯ ಭಾಗವೇ ನೆಲಸಮಗೊಂಡಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.ಮೂರ್ನಾಡು: ಮಳೆಯಿಂದಾಗಿ ಕಾಂತೂರು ಮೂರ್ನಾಡು ಗ್ರಾ.ಪಂ.ವ್ಯಾಪ್ತಿಯ ಎಂ.ಬಾಡಗ ಗ್ರಾಮದ ಗಾಯತ್ರಿ ಎಂಬವರ ಮನೆಯ ಗೋಡೆ ಬಿರುಕು ಬಿಟ್ಟಿದೆ.ಸುಂಟಿಕೊಪ್ಪ : ಸುಂಟಿಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಪನ್ಯ ಮತ್ತು ಅರೆಬೈಲು ರಸ್ತೆಯಲ್ಲಿ ಬಿದ್ದ ಮರವನ್ನು ಅಲ್ಲಿನ ಸ್ವಯಂಸೇವಕರಾದ ಪ್ರಸಾದ್ ಕುಟ್ಟಪ್ಪ, ಅಬೂಬಕರ್ ತಂಡ ತೆರವುಗೊಳಿಸಿತು.ಮಡಿಕೇರಿ: ಕಡಮಕಲ್ಲು ಗ್ರಾಮದ ಲೀಲಾವತಿ ಹಾಗೂ ಕರ್ಣಂಗೇರಿ ಗ್ರಾಮದ ಎಂ. ಮೊಯ್ದು ಅವರಿಗೆ ಮನೆ ಹಾನಿ ಪರಿಹಾರ ಮೊತ್ತ ತಲಾ ೫೦ ಸಾವಿರ ರೂಗಳ ಚೆಕ್ ಅನ್ನು ಹಾಗೂ ಮಕ್ಕಂದೂರು ಗ್ರಾಮದ ಸೀತಮ್ಮ ಅವರಿಗೆ ಮನೆಗೆ ನೀರು ತುಂಬಿ ಸಾಮಗ್ರಿಗಳು ಹಾನಿಯಾದ್ದರಿಂದ ಹತ್ತು ಸಾವಿರಗಳ ಚೆಕ್ ಅನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ವಿತರಿಸಿದರು. ಕೆಳಕೊಡ್ಲಿ ಗ್ರಾಮದಲ್ಲಿ ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯವನ್ನು ಸೆಸ್ಕ್ ಸಿಬ್ಬಂದಿ ಕೈಗೊಂಡರು.ಮಡಿಕೇರಿ: ೨ನೇ ಮೊಣ್ಣಂಗೇರಿ ಗ್ರಾಮದ ಅಪಾಯದಂಚಿನಲ್ಲಿರುವ ಕುಟುಂಬಗಳನ್ನು ಮಡಿಕೇರಿಯ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.