*ಗೋಣಿಕೊಪ್ಪ, ಆ. ೭: ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಗೋಣಿಕೊಪ್ಪ, ಪೊನ್ನಂಪೇಟೆ ವ್ಯಾಪ್ತಿಯ ಪ್ರೌಢಶಾಲಾ ವಿಭಾಗದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಸಾಯಿ ಶಂಕರ್ ಪ್ರಥಮ, ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆ ದ್ವಿತೀಯ, ಕೂರ್ಗ್ ಪಬ್ಲಿಕ್ ಶಾಲೆ ತೃತೀಯ ಸ್ಥಾನ ಪಡೆದುಕೊಂಡಿತು.
ಅಟಲ್ ಟಿಂಕರಿAಗ್ ಲ್ಯಾಬ್‌ನಲ್ಲಿ ೫ ದಿನ ನಡೆದ ವಿಶೇಷ ತರಬೇತಿ ಮತ್ತು ಅನ್ವೇಷಣೆ ಕಾರ್ಯಾಗಾರದ ನಂತರ ನಡೆದ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾರ್ಥಿಗಳಾದ ಕ್ಯಾಲಿ ಕುಟ್ಟಪ್ಪ, ಪ್ರೀತಮ್ ಹಾಗೂ ಗ್ರಂಥ ಗಂಗಮ್ಮ ತಂಡ ಬ್ಲಿಂಕ್ ಆ್ಯಪ್ ಮೂಲಕ ಮನೆಯಲ್ಲಿ ಬಳಸುವ ಉಪಕರಣಗಳನ್ನು ನಿಯಂತ್ರಿಸ ಬಹುದಾದ ತಂತ್ರಜ್ಞಾನ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು.
ಗೋಣಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಪ್ರಜ್ವಲ್, ಧನುಷ್ ಹಾಗೂ ದರ್ಶನ್ ಜನರೇಟರ್ ಹಾಗೂ ಸೇಫ್ ಲಾಕರ್ ಮಾದರಿಯನ್ನು ಬ್ಯಾಟರಿ, ಸ್ವಿಚ್ ಮತ್ತು ಪಿವಿಸಿ ಬೋರ್ಡ್ ಬಳಸಿಕೊಂಡು ಸಿದ್ಧಪಡಿಸಿ ದ್ವಿತೀಯ ಬಹುಮಾನ ದಕ್ಕಿಸಿಕೊಂಡರು.
ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ದರ್ಶ್, ಕೃತಿನ್ ಹಾಗೂ ಕೃತಿಕ್ ಅನ್ವೇಷಣೆಯ ಅತ್ಯಾಧುನಿಕ ವಾಹನ ಪಾರ್ಕಿಂಗ್ ತಂತ್ರಜ್ಞಾನದ ಮಾದರಿ ತೃತೀಯ ಬಹುಮಾನ ಪಡೆದುಕೊಂಡಿತು.
ನಾವಿನ್ಯತೆ ಮೂಲಕ ಸಮಾಜಕ್ಕೆ ಬೇಕಾದ ಮಾದರಿ ಮೂಡಿಬರಬೇಕು ಎಂದು ಅಟಲ್ ಟಿಂಕರಿAಗ್ ಲ್ಯಾಬ್ ನೋಡೆಲ್ ಅಧಿಕಾರಿ ನೀಲಕಂಠಪ್ಪ ಸಲಹೆ ನೀಡಿದರು. ಜನ ಸಾಮಾನ್ಯರು ಉಪಯೋಗಿಸಲು ಅವಕಾಶ ನೀಡುವಂತಹ; ಇಲ್ಲಿವರೆಗೂ ಅನ್ವೇಷಣೆಗೆ ನಿಲುಕದ ಪ್ರಯೋಗ ತಯಾರಿಗೆ ಮಕ್ಕಳು ಚಿಂತನೆ ನಡೆಸಬೇಕಿದೆ. ಇದು ಸರ್ಕಾರದ ಮೂಲ ಉದ್ದೇಶವಾಗಿದೆ. ಅಟಲ್ ಟಿಂಕರಿAಗ್ ಲ್ಯಾಬ್ ಮೂಲಕ ಸಾಕಷ್ಟು ಮಕ್ಕಳಲ್ಲಿ ಪ್ರಯೋಗಗಳು ಮೂಡಿಬರಲು ಅವಕಾಶ ದೊರಕಿದೆ ಎಂದು ಅವರು ಹೇಳಿದರು.
ವೀರಾಜಪೇಟೆ ಕ್ಷೇತ್ರ ಶಿಕ್ಷಣ ಅಧಿಕಾರಿ ಶ್ರೀಶೈಲ ಬೀಳಗಿ ಮಾತನಾಡಿ, ಪ್ರತಿಯೊಂದು ಪ್ರಯೋಗಗಳು ಮಕ್ಕಳ ಚಿಂತನಾಶಕ್ತಿ ಯನ್ನು ತೋರಿಸುತ್ತಿದೆ. ಮಾರುಕಟ್ಟೆ ಯಲ್ಲಿ ಪ್ರಯೋಗಕ್ಕೆ ಬೇಕಾದ ಪೂರಕ ವಸ್ತುಗಳು ದೊರೆಯುತ್ತಿದೆ. ಸುಲಭವಾಗಿ ಮಾದರಿ ತಯಾರಿಸಲು ಮಕ್ಕಳಿಗೆ ಅವಕಾಶ ದೊರಕಿದೆ ಎಂದರು. ಕೂರ್ಗ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ಡಾ. ಬೆನ್ನಿ ಕೊರಿಯಕೊಸ್, ಕೂಡಿಗೆ ಡಯಟ್ ಅಧಿಕಾರಿಗಳಾಧ ಶಿವಪ್ರಸಾದ್, ವಿಜಯ, ಗೋಣಿಕೊಪ್ಪ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ಮುಖ್ಯಶಿಕ್ಷಕ ಹೆಚ್.ಕೆ. ಕುಮಾರ್ ಹಾಜರಿದ್ದರು.