ಸೋಮವಾರಪೇಟೆ, ಆ.೭: ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು ಅಲ್ಲಲ್ಲಿ ಹಾನಿ ಪ್ರಕರಣಗಳು ವರದಿಯಾಗುತ್ತಲೇ ಇವೆ.
ಕಳೆದ ೫ ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯೊಂದಿಗೆ ಗಾಳಿಯ ಆರ್ಭಟವೂ ಜೋರಾಗಿದ್ದು ವಾತಾವರಣ ಅತಿ ಶೀತದಿಂದ ಕೂಡಿದೆ.
ಭಾರೀ ಮಳೆಯಿಂದಾಗಿ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನಿಲುವಾಗಿಲು ಗ್ರಾಮದ ನಿಂಗಯ್ಯ ಅವರ ಮನೆಯ ಗೋಡೆ ಕುಸಿತಗೊಂಡಿದ್ದು ಶೇಕಡಾ ೨೫ರಷ್ಟು ಹಾನಿಯಾಗಿದೆ.
ದೊಡ್ಡ ಭಂಡಾರ ಗ್ರಾಮದ ದೇವರಾಜೇಗೌಡ ಅವರಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿತವಾಗಿದೆ. ದೊಡ್ಡಕೊಡ್ಲಿ ಗ್ರಾಮದ ಪ್ರೇಮಾ ಅವರಿಗೆ ಸೇರಿದ ವಾಸದ ಮನೆಯ ಗೋಡೆ ಅತಿ ಶೀತಕ್ಕೆ ನೆಲಸಮವಾಗಿದ್ದು ಶೇಕಡಾ ೨೫ ರಷ್ಟು ನಷ್ಟ ಸಂಭವಿಸಿರುವ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ತಾಲೂಕು ಆಡಳಿತಕ್ಕೆ ವರದಿ ನೀಡಿದ್ದಾರೆ.