ಪೊನ್ನAಪೇಟೆ, ಆ.೭: ತಮ್ಮ ಚಾಲಾಕಿತನದಿಂದ ಅಂಗಡಿ ಮಾಲೀಕರ ಹಾಗೂ ಸಿಬ್ಬಂದಿಗಳ ಗಮನವನ್ನು ಬೇರೆಡೆಗೆ ಸೆಳೆದು ಹಾಡಹಗಲೇ ಅಂಗಡಿಯ ಗಲ್ಲಾಪೆಟ್ಟಿಗೆ ತೆರೆದು ನಗದು ಕಳ್ಳತನ ಮಾಡುತಿದ್ದ ಅಂತರ್ ಜಿಲ್ಲಾ ಇಬ್ಬರು ಕಳ್ಳರ ಪೈಕಿ ಓರ್ವನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ತಲೆಮರೆಸಿಕೊಂಡಿದ್ದಾನೆ. ಹಾಸನ ಜಿಲ್ಲೆಯ ವಿಜಯನಗರ ೨ ನೇ ಹಂತದ ನಿವಾಸಿ ಮಹಮದ್ ಇಕ್ಬಾಲ್ (೫೪) ಎಂಬವನೇ ಬಂಧಿತ ಆರೋಪಿ. ಈತ ಹಾಗೂ ಈತನ ಸಹಚರ ಬೇಲೂರು ನಿವಾಸಿ ಔರನ್ ಪೊನ್ನಂಪೇಟೆಯಲ್ಲಿ ಎರಡು ಕಡೆ ಹಾಗೂ ಗೋಣಿಕೊಪ್ಪಲಿನಲ್ಲಿ ಒಂದು ಕಡೆ ನಗದು ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದರು.

ಮೂರು ಕಡೆ ಕಳವು

ಏಪ್ರಿಲ್ ೨೧ ರಂದು ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿರುವ ಸೀತಾರಾಮ್ ಎಂಬವರ ವೆಂಕಟೇಶ್ವರ ಟ್ರೇಡರ್ಸ್ ಕಾಫಿ ಅಂಗಡಿಗೆ ೫೦೦ ರೂಪಾಯಿಗೆ ಚಿಲ್ಲರೆ ಕೇಳುವ ನೆಪದಲ್ಲಿ ಬಂದು, ಅಂಗಡಿಯ ಗಲ್ಲಾಪೆಟ್ಟಿಗೆಯಲ್ಲಿ ಹಣ ಇರುವ ಬಗ್ಗೆ ಖಾತರಿ ಪಡಿಸಿಕೊಂಡು, ಪಕ್ಕದಲ್ಲೇ ಹೊಂಚು ಹಾಕಿ ನಿಂತಿದ್ದರು. ಅಂಗಡಿ ಮಾಲೀಕ ಸೀತಾರಾಮ್ ಊಟಕ್ಕೆ ತೆರಳುವ ಸಂದರ್ಭದಲ್ಲಿ ತಮ್ಮ ಅಂಗಡಿಯ ಶೆಟ್ರಸ್ ಅನ್ನು ಅರ್ಧಕ್ಕೆ ಮುಚ್ಚಿ ಹೋಗಿದ್ದರು. ಈ ಸಂದÀರ್ಭ ಕಳ್ಳರು ಅಂಗಡಿ

(ಮೊದಲ ಪುಟದಿಂದ) ಒಳಗೆ ನುಗ್ಗಿ ಗಲ್ಲಾಪೆಟ್ಟಿಗೆಯನ್ನು ತೆರೆದು ಅದರಲ್ಲಿದ್ದ ೧.೧೨ ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದರು.

ಇದಾದ ನಂತರ ಈ ಇಬ್ಬರು ಕಳ್ಳರು ಮೇ ೨೬ ರಂದು ಗೋಣಿಕೊಪ್ಪ ಬೈಪಾಸ್ ರಸ್ತೆಯಲ್ಲಿರುವ ಎ.ಎಸ್.ಪೂವಣ್ಣ ಅವರ ಫೀಡ್ಸ್ ಅಂಗಡಿಗೆ ಫೀಡ್ಸ್ ಖರೀದಿಯ ನೆಪದಲ್ಲಿ ಬಂದಿದ್ದು, ಇಬ್ಬರಲ್ಲಿ ಒಬ್ಬ ಫೀಡ್ಸ್ ಚೀಲ ತೋರಿಸುವಂತೆ ಅಂಗಡಿಯವರನ್ನು ಮಳಿಗೆಗೆ ಕರೆದೊಯ್ದ ವೇಳೆ ಮತ್ತೊಬ್ಬ ಕ್ಯಾಶ್ ಕೌಂಟರ್‌ನಲ್ಲಿದ್ದ ರೂ. ೫೧,೮೦೦ ಹಣವನ್ನು ಕಳವು ಮಾಡಿ, ಖರೀದಿಗೆ ಮತ್ತೆ ಬರುವುದಾಗಿ ಹೇಳಿ ಪರಾರಿಯಾಗಿದ್ದರು. ಜುಲೈ ೨೨ ರಂದು ಮತ್ತೆ ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿರುವ ಕೌಶಲ್ಯ ಟ್ರೇಡರ್ಸ್ ಸಿಮೆಂಟ್ ಅಂಗಡಿಯಲ್ಲಿ ಸಿಮೆಂಟ್ ಖರೀದಿಯ ನೆಪದಲ್ಲಿ ಬಂದಿದ್ದ ಇವರುಗಳು ಅಲ್ಲಿಯೂ ತಮ್ಮ ಚಾಲಾಕಿತನದಿಂದ ಗಲ್ಲಾಪೆಟ್ಟಿಗೆಯಲ್ಲಿದ್ದ ೧೦ ಸಾವಿರ ರೂಪಾಯಿ ಹಣವನ್ನು ಎಗರಿಸಿದ್ದರು.

ಸಿಸಿ ಕ್ಯಾಮೆರಾ ಇಲ್ಲದೆ ಇರುವ ಅಂಗಡಿಗಳನ್ನೇ ಆಯ್ಕೆ ಮಾಡಿಕೊಂಡು ಹಾಡಹಗಲೇ ಕಳ್ಳತನ ಮಾಡಿ ತಲೆ ಮರೆಸಿಕೊಂಡು ಓಡಾಡುತಿದ್ದ ಈ ಅಂತರ್ ಜಿಲ್ಲಾ ಕಳ್ಳರನ್ನು ಹಿಡಿಯುವುದು ಪೊನ್ನಂಪೇಟೆ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಸಕಲೇಶಪುರ, ಹಾಸನ, ಮೂಡಿಗೆರೆ, ಆಲೂರು, ಚಿಕ್ಕಮಂಗಳೂರು, ಕೊಣನೂರು, ಪಿರಿಯಾಪಟ್ಟಣ ಕಡೆಗಳಲ್ಲಿ ಸಂಚರಿಸಿ ಬಾತ್ಮಿದಾರರಿಂದ ಮಾಹಿತಿ ಸಂಗ್ರಹಿಸಿ ಸತತವಾಗಿ ೭ ದಿನಗಳಿಂದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆರೋಪಿ ಪದೇ ಪದೇ ಮೊಬೈಲ್ ಸಿಮ್ ಬದಲಿಸುತ್ತಿದ್ದರಿಂದ ಪತ್ತೆಕಾರ್ಯಕ್ಕೆ ತೊಡಕಾಗುತಿತ್ತು. ಆದರೆ ಮಹಮದ್ ಇಕ್ಬಾಲ್ ಇಂದು ಮತ್ತೆ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಲು ಆಲ್ಟೊ ಕಾರು (ಕೆ.ಎ.೪೨.ಎಂ.೦೩೪೮) ನಲ್ಲಿ ಬರುತ್ತಿದ್ದಾಗ ಪಿರಿಯಾಪಟ್ಟಣ ತಾಲೂಕಿನ ಬೂದಿತಿಟ್ಟು ಗ್ರಾಮದ ಅರಣ್ಯ ಚೆಕ್‌ಪೋಸ್ಟ್ ಬಳಿ ಆತನನ್ನು ಪೊಲೀಸರು ಬಂಧಿಸಿ, ಕಾರನ್ನು ವಶಪಡಿಸಿಕೊಂಡಿದ್ದಾರೆ. ಮಹಮದ್ ಇಕ್ಬಾಲ್‌ಗೆ ಇಬ್ಬರು ಪತ್ನಿಯರಿದ್ದು, ಐಷಾರಾಮಿ ಜೀವನ ನಡೆಸುವ ಸಲುವಾಗಿ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಎಂದು ವಿಚಾರಣೆ ವೇಳೆಯಲ್ಲಿ ತಿಳಿದು ಬಂದಿದೆ.

ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ನಿರ್ದೇಶನದ ಮೇರೆಗೆ ಡಿವೈಎಸ್‌ಪಿ ನಿರಂಜನ್ ರಾಜೇ ಅರಸ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದ ರಾಜು, ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಪೊಲೀಸ್ ಉಪ ನಿರೀಕ್ಷಕ ಹೆಚ್.ಸಿ.ಸುಬ್ರಮಣ್ಯ, ಸಿಬ್ಬಂದಿಗಳಾದ ಎಂ.ಡಿ.ಮನು ಹಾಗೂ ಮಹದೇಶ್ವರ ಸ್ವಾಮಿ, ಸಿ.ಆರ್.ಡಿ. ವಿಭಾಗದ ರಾಜೇಶ್, ಪ್ರವೀಣ್, ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮಹಮದ್ ಇಕ್ಬಾಲ್‌ನ ಸಹಚರ ಔರನ್‌ಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. -ಚನ್ನನಾಯಕ