ಮಡಿಕೇರಿ, ಆ. ೫: ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರಲು ಅರ್ಜಿ ಹಾಕಿರುವ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಬಂಟ್ಸ್ ಅಸೋಸಿಯೇಷನ್ ಹಮ್ಮಿಕೊಂಡಿರುವ ‘ಅಗ್ನಿವೀರ್ ೨೦೨೨’ ರಸ್ತೆ ಓಟ ಸ್ಪರ್ಧೆ ತಾ. ೭ರಂದು ನಡೆಯಲಿದೆ. ಮಡಿಕೇರಿ ಹೊರವಲಯದ ಕ್ಲಬ್ ಮಹೀಂದ್ರ ಬಳಿಯಿಂದ ಆರಂಭವಾಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಗೇಟ್ ಬಳಿ ಕೊನೆಗೊಳ್ಳಲಿದೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಚಂದ್ರಶೇಖರ್‌ರೈ ತಿಳಿಸಿದ್ದಾರೆ.

ಬೆಳಗ್ಗೆ ೯.೩೦ಕ್ಕೆ ಸ್ಪರ್ಧೆ ಆರಂಭವಾಗಲಿದ್ದು, ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಚಾಲನೆ ನೀಡಲಿದ್ದಾರೆ. ನಂತರ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಆವರಣದಲ್ಲಿ ಪುಲ್‌ಅಪ್ಸ್ ಸ್ಪರ್ಧೆ ಇರಲಿದೆ. ಬಳಿಕ ಬಾಲಭವನ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಹಾಗೂ ಪ್ರಶಸ್ತಿ ವಿತರಣೆ ನೆರವೇರಲಿದೆ.

ಜಿಲ್ಲೆಯ ವಿವಿದೆಡೆಯ ನೂರಕ್ಕೂ ಅಧಿಕ ಮಂದಿ ಅಭ್ಯರ್ಥಿಗಳು ಸ್ಪರ್ಧೆಗೆ ಹೆಸರು ನೋಂದಾಯಿಸಿಕೊAಡಿದ್ದಾರೆ. ಓಟ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ತಲಾ ನಾಲ್ಕು ಸ್ಪರ್ಧಿಗಳಿಗೆ ಹಾಗೂ ಪುಲ್‌ಅಪ್ಸ್ನಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ವಿಶೇಷ ಬಹುಮಾನ ನೀಡಲಾಗುವುದು. ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸ್ಪರ್ಧಿಗೆ ವಿಶೇಷ ಉಡುಗೊರೆ ನೀಡಲಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.