ಶನಿವಾರಸಂತೆ, ಆ. ೪: ದುಂಡಳ್ಳಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಉಪಾಧ್ಯಕ್ಷ ಎಸ್.ಸಿ. ನಿತಿನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಪಂಚಾಯಿತಿ ಮಟ್ಟದಲ್ಲಿ ಕುಡಿಯುವ ನೀರಿನ ದುರಸ್ತಿ ಮಾಡುವ ಪೈಪ್ ಸಾಮಗ್ರಿಗಳು ಕಳಪೆ ಗುಣಮಟ್ಟ ದಿಂದ ಕೂಡಿದೆ ಎಂದು ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಮುಂದೆ ಉತ್ತಮ ಗುಣಮಟ್ಟದ ಪೈಪ್ ರಿಪೇರಿ ಮಾಡುವ ಸಾಮಗ್ರಿಗಳನ್ನು ಒದಗಿಸು ವಂತೆ ಹಾಗೂ ಸಾರ್ವಜನಿಕರ ಕುಡಿಯುವ ನೀರಿನ ಟ್ಯಾಂಕ್ಗಳನ್ನು ಆರೋಗ್ಯ ದೃಷ್ಟಿಯಿಂದ ತುರ್ತಾಗಿ ಶುಚಿಗೊಳಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ದುಂಡಳ್ಳಿ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯಕ್ಕೆ ತಾ.ಪಂ. ಹಾಗೂ ಜಿ.ಪಂ. ಪ್ರತ್ಯೇಕವಾದ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಪಿಡಿಓ ಉತ್ತರಿಸಿದರು. ಕಸ ವಿಲೇವಾರಿ ಘಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೂಚಿಸ ಲಾಯಿತು. ಸದಸ್ಯ ಡಿ.ಪಿ. ಭೋಜಪ್ಪ ಮಾತನಾಡಿ, ಅತಿವೃಷ್ಟಿಯಿಂದ ಮೃತಪಟ್ಟ ವಸಂತಮ್ಮ ಕುಟುಂಬಕ್ಕೆ ಸರಕಾರದಿಂದ ನೀಡಿದ ಸಹಾಯ ಧನವನ್ನು ಶಾಸಕರು ಪಂಚಾಯಿತಿಗೆ ತಿಳಿಸದೆ ಪಕ್ಷದ ಕಾರ್ಯಕರ್ತರನ್ನು ಸೇರಿಸಿಕೊಂಡು ನೀಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಎಸ್.ಪಿ. ಭಾಗ್ಯ, ಕೆ.ಎಸ್. ಜಾನಕಿ, ನಂದಿನಿ ನಾಗರತ್ನ, ಪಿ.ಹೆಚ್. ಗೋಪಿಕಾ, ಸತ್ಯವತಿ, ಹೆಚ್.ಆರ್. ಭವಾನಿ, ಎಸ್.ಪಿ. ಕಾಂತರಾಜ್, ಬಿ.ಎಸ್. ಮಹಾಂತೇಶ್, ಎಂ.ಡಿ. ದೇವರಾಜ್, ಸಿ.ಜೆ. ಗಿರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.