ಸೋಮವಾರಪೇಟೆ, ಆ. ೪: ಇಲ್ಲಿನ ತಥಾಸ್ತು ಸಾತ್ವಿಕ ಸಂಸ್ಥೆ ವತಿಯಿಂದ ಮಡಿಕೇರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಮಡಿಕೇರಿ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಉದ್ಘಾಟಿಸಿದರು. ನಂತರ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ರಕ್ತದ ಕೊರತೆ ಹೆಚ್ಚಾಗುತ್ತಿದ್ದು, ಇದನ್ನು ತುಂಬಲು ರಕ್ತದಾನಿಗಳು ಮುಂದೆ ಬರಬೇಕಿದೆ. ಹೆಚ್ಚಿನವರಲ್ಲಿ ರಕ್ತದಾನದ ಬಗ್ಗೆ ಅರಿವಿನ ಕೊರತೆ ಇರುವುದರಿಂದ ಯುವಕರು ಮುಂದಾಗುತ್ತಿಲ್ಲ. ಇದರ ಬಗ್ಗೆ ಜಿಲ್ಲಾಡಳಿತ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಥಾಸ್ತು ಸಾತ್ವಿಕ ಸಂಸ್ಥೆಯ ಅಧ್ಯಕ್ಷ ಉದಯ್ ಮಾಳವ ವಹಿಸಿದ್ದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಬಿ.ಟಿ. ಜನಾರ್ಧನ, ಖಜಾಂಚಿ ಮರಗೋಡು ಗಣೇಶ್, ಕಾನೂನು ಸಲಹೆಗಾರರಾದ ರೂಪಾ ಕಾಳಪ್ಪ, ಪದಾಧಿಕಾರಿಗಳಾದ ಎಚ್.ಆರ್. ಗಿರೀಶ್, ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.