ಮಡಿಕೇರಿ, ಆ. ೪: ಕರಾವಳಿ ಭಾಗದಲ್ಲಿ ನಡೆದಿರುವ ಅಮಾಯಕ ಯುವಕರ ಹತ್ಯೆ ಪ್ರಕರಣ ಮತ್ತು ಪರಿಹಾರ ವಿತರಣೆಯಲ್ಲಿ ಸರ್ಕಾರ ತೋರಿರುವ ತಾರತಮ್ಯ ನೀತಿ ಖಂಡನೀಯವೆAದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ. ಉಸ್ಮಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಸಯ್ಯದ್ ಬಾವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸುಳ್ಯದ ಮಸೂದ್, ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹಾಗೂ ಸುರತ್ಕಲ್ ಫಾಜಿಲ್ನ ಹತ್ಯೆ ಅಮಾನವೀಯ ಕೃತ್ಯವೆಂದು ವಿಷಾದಿಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯದಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕೇವಲ ಹತ್ತು ದಿನಗಳಲ್ಲಿ ಮೂವರು ಅಮಾಯಕ ಯುವಕರು ಬಲಿಯಾಗಿದ್ದು, ಬಡ ಕುಟುಂಬಗಳು ಶೋಕ ಸಾಗರದಲ್ಲಿ ಮುಳುಗಿವೆ. ಎಲ್ಲಾ ಪ್ರಜೆಗಳನ್ನು ಪ್ರತಿನಿಧಿಸುವ ಮುಖ್ಯಮಂತ್ರಿಗಳು ಕೇವಲ ಪ್ರವೀಣ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿದ್ದಾರೆ. ಆದರೆ ಮಸೂದ್ ಹಾಗೂ ಫಾಜಿಲ್ ಕುಟುಂಬವನ್ನು ನಿರ್ಲಕ್ಷಿಸಿದ್ದಾರೆ. ಈ ರೀತಿಯ ತಾರತಮ್ಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉತ್ತಮ ಸಂದೇಶವನ್ನು ನೀಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.