ಸೋಮವಾರಪೇಟೆ, ಆ. ೩: ತಾಲೂಕಿನ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಕಚೇರಿಗೆ ಇಂದು ಮಧ್ಯಾಹ್ನದಿಂದ ೩.೩೦ರ ವರೆಗೆ ಬೀಗ ಜಡಿದಿದ್ದರಿಂದ ಕಚೇರಿ ಕೆಲಸಕ್ಕೆ ಆಗಮಿಸಿದ್ದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಮಧ್ಯಾಹ್ನ ಕಚೇರಿಗೆ ಬೀಗ ಜಡಿದ ಪಿಡಿಓ ಗಿರೀಶ್ ಅವರು ಕಚೇರಿಯಿಂದ ಹೊರ ತೆರಳಿದ್ದು, ಇತರ ಸಿಬ್ಬಂದಿಗಳೂ ಸಹ ಕಚೇರಿಯಿಂದ ಹೊರ ಹೋಗಿದ್ದಾರೆ. ಸಿಬ್ಬಂದಿಗಳ ಊಟದ ಸಮಯ ೧.೩೦ ರಿಂದ ೨.೩೦ರವರೆಗೆ ನಿಗದಿಯಾಗಿದ್ದು, ಈ ಸಮಯ ಮೀರಿದರೂ ಯಾರೊಬ್ಬರ ಸುಳಿವು ಇಲ್ಲದ್ದರಿಂದ ಕಚೇರಿ ಕೆಲಸಕ್ಕೆ ಆಗಮಿಸಿದ್ದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಕಚೇರಿಗೆ ಬೀಗ ಹಾಕಿರುವ ಬಗ್ಗೆ ಪಿಡಿಓ ಗಿರೀಶ್ ಅವರಿಗೆ ಕರೆ ಮಾಡಿ ವಿಚಾರಿಸಿದ ಸಂದರ್ಭ ಬೇಜವಾಬ್ದಾರಿಯ ಮಾತುಗಳನ್ನಾಡಿ ಕರೆ ಸ್ಥಗಿತಗೊಳಿಸಿದ್ದಾರೆ. ತಕ್ಷಣ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಸ್ಥಳೀಯರಾದ ಶಿವಕುಮಾರ್ ಆಗ್ರಹಿಸಿದ್ದಾರೆ.