ನಾಪೋಕ್ಲು, ಆ. ೪: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂರ್ನಾಡು ವಲಯದ ಪದಾಧಿಕಾರಿಗಳ ಒಂದು ದಿನದ ತರಬೇತಿ ಕಾರ್ಯಾಗಾರ ಮೂರ್ನಾಡು ಪಂಚಾಯಿತಿ ಸಮುದಾಯ ಭವನದಲ್ಲಿ ನಡೆಯಿತು. ಪಂಚಾಯಿತಿ ಅಧ್ಯಕ್ಷೆ ಸುಜಾತಾ ಚಾಲನೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನರ ಅಭಿವೃದ್ಧಿಗೋಸ್ಕರ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದು ಇದರಿಂದ ಅನೇಕ ಬಡ ಕುಟುಂಬಗಳು ಅಭಿವೃದ್ಧಿಯನ್ನು ಕಾಣುವಂತಾಗಿದೆ ಈ ಕಾರ್ಯಕ್ರಮವು ಮುಂದಿನ ದಿನಗಳಲ್ಲಿಯೂ ಯಶಸ್ವಿಯಾಗಿ ಮುನ್ನಡೆದುಕೊಂಡು ಹೋಗಲಿ ಎಂದರು. ತರಬೇತಿ ಕಾರ್ಯಕ್ರಮದಲ್ಲಿ ಯೋಜನೆಯು ನಡೆದು ಬಂದ ಹಾದಿ, ಕ್ಷೇತ್ರದ ಹಿನ್ನೆಲೆ ಯೋಜನೆಯಲ್ಲಿರುವ ವಿವಿಧ ಕಾರ್ಯಕ್ರಮಗಳು ಮತ್ತು ಕ್ರಿಯಾ ಯೋಜನೆ ಬಗ್ಗೆ ವೀರಾಜಪೇಟೆ-ಮಡಿಕೇರಿ ತಾಲೂಕಿನ ಯೋಜನಾಧಿಕಾರಿ ದಿನೇಶ್ ಬಿ. ಮಾಹಿತಿ ನೀಡಿದರು. ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿಯ ಬಗ್ಗೆ ತಾಲೂಕು ಕೃಷಿ ಮೇಲ್ವಿಚಾರಕ ರಾಮ್ ಕುಮಾರ್ ಮಾಹಿತಿ ನೀಡಿದ ಕಾರ್ಯಕ್ರಮದಲ್ಲಿ ಮೂರ್ನಾಡು ವಲಯದ ೧೦ ಒಕ್ಕೂಟದ ಅಧ್ಯಕ್ಷರುಗಳು ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕರಾದ ಅನುಷಾ ರೈ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರತಿನಿಧಿ ಮಮ್ತಾಜ್ ಸ್ವಾಗತಿಸಿ, ಶಿವಾನಂದ ವಂದಿಸಿದರು.