ಸೋಮವಾರಪೇಟೆ, ಆ. ೨: ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡು ಕೃಷಿ ಕಾರ್ಯ ಕೈಗೊಂಡಿರುವ ಮಂದಿಗೆ ಸರ್ಕಾರದ ವತಿಯಿಂದ ಹಕ್ಕುಪತ್ರಗಳನ್ನು ನೀಡಿದ್ದು, ಇದನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿ ಕೊಳ್ಳಬಾರದು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಮೂಲಕ ಮಂಜೂರಾದ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಕೃಷಿಕರೇ ದೇಶದ ಬೆನ್ನೆಲುಬಾಗಿದ್ದು, ಹಲವಷ್ಟು ಮಂದಿ ತಾವು ಕೃಷಿ ಮಾಡುತ್ತಿರುವ ಭೂಮಿಗೆ ದಾಖಲೆಗಳಿಲ್ಲದ ಹಿನ್ನೆಲೆ ಸಮಸ್ಯೆ ಅನುಭವಿಸುವಂತಾಗಿದೆ. ಪ್ರಾಕೃತಿಕ ವಿಕೋಪ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ನಷ್ಟ ಅನುಭವಿಸಿದರೆ ಸರ್ಕಾರದಿಂದ ಪರಿಹಾರ ಸಿಗುವು ದಿಲ್ಲ. ಇದರೊಂದಿಗೆ ಸರ್ಕಾರದ ಇನ್ನಿತರ ಸೌಲಭ್ಯಗಳಿಂದಲೂ ವಂಚಿತರಾಗಬೇಕಿದೆ. ಈ ಹಿನ್ನೆಲೆ ಸರ್ಕಾರವು ಕಂದಾಯ ಇಲಾಖೆ ಮೂಲಕ ಜಾಗಕ್ಕೆ ದಾಖಲೆಗಳನ್ನು ಒದಗಿಸಿಕೊಡುತ್ತಿದೆ ಎಂದರು.
ಅಕ್ರಮ ಸಕ್ರಮ ಸಮಿತಿಗೆ ಅರ್ಜಿಯನ್ನು ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದ್ದು, ಈವರೆಗೆ ಅರ್ಜಿ ಸಲ್ಲಿಸದ ಮಂದಿ ಅಗತ್ಯ ದಾಖಲಾತಿಗಳೊಂದಿಗೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದು ಶಾಸಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ೨೩ ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಉಪ ತಹಶೀಲ್ದಾರ್ ಲೋಹಿತ್, ಕಂದಾಯ ಇಲಾಖೆಯ ಸತೀಶ್, ಮೋಹನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯ ಮಹೇಶ್, ಶುಭಕರ್, ಬೇಳೂರು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.