ಸಿದ್ದಾಪುರ, ಆ. ೨: ಸಿದ್ದಾಪುರ ಗ್ರಾ.ಪಂ.ಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಸಿದ್ದಾಪುರ ಗ್ರಾ.ಪಂ. ಎದುರು ಸಿಪಿಐ (ಎಂ) ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾಗಾರರು ಸಿಪಿಐ(ಎಂ) ಪಕ್ಷದ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಪಂಚಾಯಿತಿ ವಿರುದ್ಧ ಘೋಷಣೆಯನ್ನು ಕೂಗಿದರು. ನಂತರ ಸಿದ್ದಾಪುರ ಪಂಚಾಯಿತಿ ಕಚೇರಿ ಎದುರು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಿಪಿಐ(ಎಂ) ಪಕ್ಷದ ಕಾರ್ಯದರ್ಶಿ ಹೆಚ್.ಬಿ ರಮೇಶ್, ಸಿದ್ದಾಪುರ ಗ್ರಾ.ಪಂ. ಆಡಳಿತ ಮಂಡಳಿಯು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದರು. ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷರು ತಮಗೆ ಬೇಕಾದ ಗುತ್ತಿಗೆದಾರರಿಗೆ ಟೆಂಡರ್ ಪ್ರಕ್ರಿಯೆ ನಡೆಸದೇ ಕಾನೂನುಗಳನ್ನು ಗಾಳಿಗೆ ತೂರಿ ಗುತ್ತಿಗೆ ನೀಡಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಿ ಮೇಲಾಧಿಕಾರಿಗಳು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ನಿವೇಶನ ರಹಿತರಿಗೆ ನಿವೇಶನ ನೀಡುವಲ್ಲಿ ಪಂಚಾಯಿತಿ ಆಸಕ್ತಿ ವಹಿಸುತ್ತಿಲ್ಲ ಎಂದು ದೂರಿದರು. ಸಿಪಿಐ (ಎಂ) ಪಕ್ಷದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಾಬು ಮಾತನಾಡಿ, ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸದೇ ರಸ್ತೆ ಬದಿ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ದುರ್ನಾತ ಬೀರುತ್ತಿದೆ. ಪಟ್ಟಣದ ಸುತ್ತಲೂ ಬೀದಿ ದೀಪಗಳನ್ನು ದುರಸ್ತಿಗೊಳಿಸದೇ ನಿರ್ಲಕ್ಷö್ಯ ವಹಿಸುತ್ತಿರುವುದು ಖಂಡನೀಯ ಎಂದರು. ಗ್ರಾ.ಪಂ. ಕಚೇರಿ ಎದುರು ಇರುವ ಸಾರ್ವಜನಿಕ ಬಾವಿಯೊಂದನ್ನು ಮುಚ್ಚಿದ್ದು ಅದನ್ನು ತೆರೆಯಬೇಕೆಂದು ಒತ್ತಾಯಿಸಿದರು. ಪ್ರಕ್ರಿಯೆ ನಡೆಸದೆ ನೀಡಿರುವ ಕಾಮ ಗಾರಿಗಳನ್ನು ಕೂಡಲೇ ಸ್ಥಗಿತಗೊಳಿಸ ಬೇಕೆಂದು ಸಾಬು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಿಪಿಐ (ಎಂ) ಪಕ್ಷದ ಪ್ರಮುಖರಾದ ಎನ್.ಡಿ. ಕುಟ್ಟಪ್ಪ, ಎನ್.ಕೆ. ಅನಿಲ್, ಅಬ್ದುಲ್ ರೆಹಮಾನ್, ವೈಜು, ಮುಸ್ತಫ ಇನ್ನಿತರರು ಹಾಜ ರಿದ್ದರು. ಪಿಡಿಓ ಮನ್ ಮೋಹನ್ ಅವರಿಗೆ ಮನವಿಪತ್ರ ಸಲ್ಲಿಸಿದರು.