ಚೆಟ್ಟಳ್ಳಿ, ಆ. ೨: ಪತ್ರಿಕಾ ದಿನಾಚರಣೆ ಅಂಗವಾಗಿ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಚೆಟ್ಟಳ್ಳಿಯ ಕೇಂದ್ರೀಯ ಪ್ರಾಯೋಗಿಕ ತೋಟಗಾರಿಕಾ ಕೇಂದ್ರದ ಸಹಯೋಗದಲ್ಲಿ ತಾ. ೪ ರಂದು ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ಪುತ್ತರೀರ ಕರುಣ್ ಕಾಳಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕೆ ಪ್ರಾಯೋಗಿಕ ಕೇಂದ್ರದಲ್ಲಿ ಬೆಳಿಗ್ಗೆ ೯.೩೦ ರಿಂದ ತೋಟಗಾರಿಕೆ ಕ್ಷೇತ್ರದ ಪರಿಚಯ. ಪ್ರಾಯೋಗಿಕ ಕೇಂದ್ರದ ಕಾರ್ಯ ವಿಧಾನ, ಅಲ್ಲಿ ಕಂಡು ಹಿಡಿದಿರುವ ವಿವಿಧ ತಳಿಗಳ ಬೆಳೆಗಳು, ಕಸಿ ಕಟ್ಟುವ ವಿಧಾನ ಸೇರಿ ಹಲವು ಉಪಯುಕ್ತ ಮಾಹಿತಿಗಳನ್ನು ವಿಜ್ಞಾನಿಗಳು ನೀಡಲಿದ್ದಾರೆ.

ಬೆಳಿಗ್ಗೆ ೧೧.೩೦ಕ್ಕೆ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಚೆಟ್ಟಳ್ಳಿಯ ಕೇಂದ್ರೀಯ ಪ್ರಾಯೋಗಿಕ ತೋಟಗಾರಿಕಾ ಕೇಂದ್ರದ ನಿರ್ದೇಶಕ ಡಾ. ರಾಜೇಂದ್ರನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಾದ ಕೆ.ಜಿ. ಶಿವಾನಿ, ಚೈತನ್ಯ ಸಿ. ಮೋಹನ್, ಚೇತನಾ ರೈ ಬಿ.ಎಸ್., ಚಿತ್ತಾರ ಎಸ್.ಪಿ., ಇಂಚರ ಎಸ್.ಪಿ., ತಿಷ್ಯಾ ಪೊನ್ನೇಟಿ, ಮಹಮ್ಮದ್ ಅರ್ಹಾನ್, ಮಹಮ್ಮದ್ ಜೈನ್ ಹಾಗೂ ಮುಕುಂದ್ ಎನ್. ಶ್ರೇಷ್ಠಿ ಅವರುಗಳನ್ನು ಸನ್ಮಾನಿಸಲಾಗುವುದು.

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ಪುತ್ತರೀರ ಕರುಣ್ ಕಾಳಯ್ಯ, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಚೆಟ್ಟಳ್ಳಿಯ ಪತ್ರಿಕಾ ವಿತರಕಿ ಪಿ. ಧನಲಕ್ಷಿö್ಮÃ ಅವರನ್ನು ಕೂಡ ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು.