(ಕುಯ್ಯಮುಡಿ ಸುನಿಲ್)
ಭಾಗಮಂಡಲ, ಆ. ೨: ಪ್ರಸ್ತುತ ವರ್ಷ ತಲಕಾವೇರಿ ವ್ಯಾಪ್ತಿಯಲ್ಲಿ ಇದುವರೆಗೆ ದಾಖಲೆಯ ೧೫೨.೬ ಇಂಚು ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ ೨೦ ಇಂಚು ಅಧಿಕವಾಗಿದೆ.
ಭಾಗಮಂಡಲ ವ್ಯಾಪ್ತಿ ಯಲ್ಲಿಯೂ ಅಧಿಕ ಮಳೆಯಾಗಿದ್ದು, ಜುಲೈ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಕಾಫಿ ಫಸಲು ನೆಲಕಚ್ಚಿವೆ. ಇದರಿಂದ ಈ ವ್ಯಾಪ್ತಿಯ ರೈತರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಭಾಗಮಂಡಲ, ಸಣ್ಣಪುಲಿಕೋಟು, ತಾವೂರು, ಅಯ್ಯಂಗೇರಿ, ಕೋರಂಗಾಲ ವ್ಯಾಪ್ತಿಯಲ್ಲಿ ಹೆಚ್ಚಿನ ಫಸಲು ನಷ್ಟವಾಗಿರುವುದು ಕಂಡು ಬಂದಿದೆ. ಕಳೆದ ಬಾರಿಯೂ ಕಾಫಿ ಪಸಲು ಉದುರಿ ನಷ್ಟ ಸಂಭವಿಸಿತ್ತು. ಈ ವರ್ಷ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಕಾಫಿ ಉದುರಿ ಹೋಗಿದೆ. ಮುಂದಿನ ತಿಂಗಳು ಮತ್ತಷ್ಟು ಮಳೆ ಸುರಿದರೆ ಸಾಕಷ್ಟು ಪ್ರಮಾಣದಲ್ಲಿ ಕಾಫಿ ಹಾನಿ ಆಗಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಕಾಫಿಯ
ಇಳುವರಿ ಕಡಿಮೆ ಇತ್ತು. ಈ ಬಾರಿ ಉತ್ತಮ ಇಳುವರಿ ಲಭಿಸುವ ಹಿನ್ನೆಲೆಯಲ್ಲಿ ಬೆಳೆಗಾರರು ಸಂತಸ ಹೊಂದಿದ್ದರು.
(ಮೊದಲ ಪುಟದಿಂದ) ಆದರೆ ಜುಲೈ ತಿಂಗಳಲ್ಲಿ ಸುರಿದ ಧಾರಾಕಾರ ಮಳೆ ಬೆಳೆಗಾರರ ಕನಸನ್ನು ನುಚ್ಚುನೂರು ಮಾಡಿದೆ. ಫೆಬ್ರವರಿ ತಿಂಗಳಲ್ಲಿ ಉತ್ತಮ ಮಳೆ ಆದುದರಿಂದ ಕಾಫಿಯ ಫಸಲು ಉತ್ತಮವಾಗಿತ್ತು. ಈ ಬಾರಿ ಭಾಗಮಂಡಲ, ತಲಕಾವೇರಿಗೆ ಜುಲೈ ಒಂದೇ ತಿಂಗಳಲ್ಲಿ ೧೦೫.೫ ಇಂಚು ಮಳೆ ಸುರಿದಿದೆ. ಈ ವರ್ಷ ತಲಕಾವೇರಿಗೆ ೧೫೨.೬ ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ೧೩೨.೩ ಇಂಚು ಮಳೆ ದಾಖಲಾಗಿತ್ತು. ೨೦೧೮-೨೦೧೯ರ ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆ ಸುರಿದಿದ್ದು ಭಾಗಮಂಡಲದಲ್ಲಿ ಜಲ ಪ್ರಳಯವಾಗಿತ್ತು. ಈ ವರ್ಷವೂ ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಳೆ ಸುರಿದರೆ ಕಾಫಿಗೆ ಮತ್ತಷ್ಟು ಹಾನಿಯಾಗಲಿದೆ.
ಭತ್ತದ ಕೃಷಿಗೆ ಅನುಕೂಲ
ಬಿಡುವು ಕೊಟ್ಟು ಸುರಿಯುತ್ತಿರುವ ಮಳೆ ಭತ್ತದ ಕೃಷಿಗೆ ಅನುಕೂಲಕರ ವಾಗಿದೆ. ಮಳೆಯೊಂದಿಗೆ ಚಳಿ ಗಾಳಿ ಇರುವುದರಿಂದ ಕಾಫಿ ಕೃಷಿಗೆ ತೊಂದರೆ ಆಗಿದೆ. ಕಾಫಿ ತೋಟದಲ್ಲಿ ಹೆಚ್ಚಾಗಿ ನುಸಿಗಳು ಕಂಡು ಬರುತ್ತಿದ್ದು, ಅಡಿಕೆ-ತೆಂಗು ಬೆಳೆಗಳಿಗೆ ಇರುವಂತೆ ಕಾಫಿಗೂ ನುಸಿ ಪೀಡೆ ತಗುಲಿದೆ ಎಂದು ರೈತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಭಾಗಮಂಡಲದಲ್ಲಿ ಈ ವರ್ಷದ ಜುಲೈ ತಿಂಗಳಲ್ಲಿ ಕೆಲವು ದಿನಗಳಲ್ಲಿ ಒಂದೇ ದಿನ ಆರರಿಂದ ಏಳು ಇಂಚು ಮಳೆ ದಾಖಲಾಗಿದೆ. ಕಾಫಿ ಗಿಡಗಳಿಗೆ ರೈತರು ಈ ಬಾರಿ ಬೇಗನೆ ಗೊಬ್ಬರ ಪೂರೈಕೆ ಮಾಡಿದ್ದರಿಂದ ಕಾಫಿಯ ಕಾಯಿಗಳು ದಪ್ಪ ಆಗಿವೆ. ಕಾವೇರಿ ಕಾಫಿಯ ಗಾತ್ರವು ಹೆಚ್ಚಿದೆ. ಕಳೆದ ಬಾರಿ ಮಳೆಯಿಂದಾಗಿ ಕಾಫಿ ಒಣಗಿಸಲಾರದೆ ರೈತರು ಸಂಕಷ್ಟ ಪಟ್ಟಿದ್ದರು. ಇದೀಗ ಕಾವೇರಿ ಕಾಫಿ ಗಾತ್ರ ದೊಡ್ಡದಾಗಿರುವುದರಿಂದ ಮತ್ತೆ ಸಮಸ್ಯೆ ಎದುರಿಸುವಂತಹ ಆತಂಕದಲ್ಲಿದ್ದಾರೆ.
ಪರಿಹಾರ ಒದಗಿಸಲು ಒತ್ತಾಯ
ಮಳೆಯಿಂದಾಗಿ ಕಾಫಿ ಉದುರಿ ಸಂಕಷ್ಟ ಅನುಭವಿಸುತ್ತಿರುವ ರೈತರು, ಈ ಬಾರಿ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಭಾಗಮಂಡಲ ವ್ಯಾಪ್ತಿಯಲ್ಲಿ ಕಾಫಿ ಉದುರಿರುವ ಮಾಹಿತಿಯನ್ನು ಇಲಾಖೆ ಅಧಿಕಾರಿಗಳು ದಾಖಲಿಸಿ ಸರ್ಕಾರಕ್ಕೆ ಕಳಿಸಿಕೊಡಬೇಕು. ನಿರಂತರ ಮಳೆಗೆ ಯೂರಿಯಾ ಗೊಬ್ಬರ ಒದಗಿಸುವಂತೆ ಕಾಫಿ ಮಂಡಳಿ ಈ ಹಿಂದೆ ಸಲಹೆ ನೀಡಿದೆ. ಆದರೆ ಮಳೆಯಿಂದಾಗಿ ಯೂರಿಯಾ ಗೊಬ್ಬರ ಹಾಕಲು ಸಾಧ್ಯವಾಗುತ್ತಿಲ್ಲ ಹಾಗೂ ಉದುರುತ್ತಿರುವ ಕಾಫಿಯನ್ನು ಹತೋಟಿಗೆ ತರಲು ರೈತರಿಗೆ ಸಾಧ್ಯವಾಗುತ್ತಿಲ್ಲ.
ರಸಗೊಬ್ಬರದ ಕೊರತೆ
ಕಾಫಿಯ ತೋಟಗಳಿಗೆ ರಸಗೊಬ್ಬರ ಪೂರೈಸುವುದು ರೈತರಿಗೆ ಸವಾಲಾಗಿದೆ. ಮಳೆ ಇರುವುದರಿಂದ ರಸಗೊಬ್ಬರ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೃಷಿ ಪತ್ತಿನ ಸಹಕಾರ ಸಂಘಗಳಿAದ ರಸ ಗೊಬ್ಬರ ಲಭಿಸುತ್ತಿಲ್ಲ. ಬೆಳೆಗಾರರ ಬೇಡಿಕೆ ಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.
ಕಾಡು ಪ್ರಾಣಿಗಳ ಉಪಟಳ
ಅಯ್ಯಂಗೇರಿ, ಸಣ್ಣಪುಲಿಕೋಟು ಗ್ರಾಮಗಳಲ್ಲಿ ಕಾಡಾನೆ ಹಾವಳಿ ಅಧಿಕವಾಗಿದೆ. ಒಂದೆಡೆ ಮಳೆಯಿಂದಾಗಿ ಕಾಫಿ ಪಸಲು ಉದುರಿ ನಷ್ಟವಾಗುತ್ತಿದ್ದರೆ, ಮತ್ತೊಂದೆಡೆ ಕಾಡು ಪ್ರಾಣಿಗಳ ಉಪದ್ರ ಬೆಳೆಗಾರರನ್ನು ಹಿಂಡಿ ಹಿಪ್ಪೆ ಮಾಡಿದೆ. ಕಾಡಾನೆಗಳು ಕಾಫಿಯ ತೋಟಗಳಲ್ಲಿ ಅಡ್ಡಾಡುತ್ತಿರುವುದ ರಿಂದ ಕಾಫಿಯ ರೆಂಬೆಗಳನ್ನು ಮುರಿದು ಹಾಕುತ್ತಿವೆ. ಇದರಿಂದಾಗಿ ಸಂಪೂರ್ಣವಾಗಿ ಕಾಫಿ ಫಸಲು ನಷ್ಟವಾಗುತ್ತಿದೆ. ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದೆ.
ಪೇರೂರು ಸುತ್ತಮುತ್ತಲಿನ ಭಾಗದಲ್ಲಿ ನಿರಂತರವಾಗಿರುವ ಕಾಡಾನೆಗಳ ಸಮಸ್ಯೆಗಳಿಂದ ಮಕ್ಕಳು ಹಾಗೂ ವಯೋವೃದ್ಧರು ಭಯದಿಂದ ಬದುಕುತ್ತಿದ್ದು, ಗ್ರಾಮದಲ್ಲಿ ಆತಂಕ ಮೂಡಿದೆ. ಬೆಳೆಗಾರರು ಕಷ್ಟಪಟ್ಟು ಬೆಳೆಸಿದ ಬೆಳೆಗಳನ್ನು ಆನೆಗಳು ಮ£ಸೋಇಚ್ಚೆ ನಾಶಪಡಿಸುತ್ತಿದ್ದು, ಬೆಳೆಗಾರರು ನೊಂದು, ಬೆಂದು, ಆತಂಕದಲ್ಲಿದ್ದಾರೆ. ಅರಣ್ಯ ಇಲಾಖೆ, ಆನೆ ಹಾವಳಿ ತಡೆಗೆ ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಇತರ ಸಂಘಟನೆಗಳೊAದಿಗೆ ಸೇರಿ ಹೋರಾಟ ರೂಪಿಸಲಾಗುವುದು ಎಂದು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಪ್ಪಚೀರ ನಂದಕುಮಾರ್ ಎಚ್ಚರಿಸಿದ್ದಾರೆ.
ರೈತರಿಗೆ ಗೊಬ್ಬರ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಈ ಹಿಂದೆ ದಾಸ್ತಾನು ಇರಿಸಿದ ಯೂರಿಯಾ ಗೊಬ್ಬರವು ರೈತರು ಖರೀದಿಸಿದ್ದು, ಕೆಲ ದಿನಗಳಲ್ಲಿ ಮತ್ತೆ ಸರಬರಾಜಾಗಲಿದೆ. ರಸ್ತೆ ಸರಿ ಇಲ್ಲದ ಕಾರಣ ಗೊಬ್ಬರ ಲೋಡ್ ತೆಗೆದುಕೊಂಡು ಬರಲು ಲಾರಿಯ ಮಾಲೀಕರು ಒಪ್ಪುತ್ತಿಲ್ಲ. ಇದರಿಂದ ಗೊಬ್ಬರ ಬರಲು ತಡವಾಗಿದೆ ಎಂದು ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.