ಭಾಗಮಂಡಲ, ಆ. ೧: ೬೬ / ೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಭಾಗಮಂಡಲದ ಬಳಿ ಪದಕಲ್ಲುನ ಕೋಡಿಮೊಟ್ಟೆಗೆ ಮಣ್ಣು ಪರೀಕ್ಷೆಗಾಗಿ ಅಧಿಕಾರಿಗಳ ತಂಡ ಆಗಮಿಸಿ ಸ್ಥಳ ಪರಿಶೀಲನೆ ಮಾಡಿತು. ಪದಕಲ್ಲುವಿನ ಕೋಡಿಮೊಟ್ಟೆ ಎಂಬಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗಾಗಿ ಎರಡೂವರೆ ಎಕ್ರೆ ಜಾಗ ಮಂಜೂರಾಗಿದ್ದು ಇಲಾಖೆಗೆ ಇನ್ನಷ್ಟೇ ಹಸ್ತಾಂತರ ಆಗಬೇಕಿದೆ.ಈ ನಿಟ್ಟಿನಲ್ಲಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ವಿದ್ಯುತ್ ವಿತರಣಾ ಕೇಂದ್ರವು ಆದಲ್ಲಿ ಭಾಗಮಂಡಲ ವ್ಯಾಪ್ತಿಯ ವಿದ್ಯುತ್ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಮುಕ್ತಿ ಸಿಗಲಿದೆ. ವಿದ್ಯುತ್ ಅಡಚಣೆಗಳಿಗೆ ಪರಿಹಾರ ಸಿಗಲಿದೆ. ಅಲ್ಲದೆ ಆರು ಫೀಡರ್‌ಗಳಾಗಿ ವಿದ್ಯುತ್ ಸರಬರಾಜು ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭ ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್, ಕೆಪಿಟಿಸಿಎಲ್‌ನ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಹಣಾಧಿಕಾರಿ ಮಹಾದೇವ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿನಯ್, ಭಾಗಮಂಡಲದ ಕಿರಿಯ ಅಭಿಯಂತರ ಮುಕ್ಕಾಟಿ ತೇಜ, ಉಪತಹಶೀಲ್ದಾರ್ ದೊರೆ, ಕಂದಾಯ ಪರಿವೀಕ್ಷಕ ಸದಾಶಿವ ಭಾಗಮಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಚೆಟ್ಟಿಮಾನಿ ಪಂಚಾಯಿತಿ ಸದಸ್ಯರಾದ ಹ್ಯಾರಿಸ್, ಅಯ್ಯಂಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಜು ಉಪಸ್ಥಿತರಿದ್ದರು.