ಮಡಿಕೇರಿ, ಜು. ೩೧: ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ‘ಓದುವ ಬೆಳಕು’ ಯೋಜನೆಯಡಿ ‘ಗ್ರಾಮ ಚದುರಂಗ ಆಡೋಣ ಬನ್ನಿ’ ಎಂಬ ವಿಭಿನ್ನ ಅಭಿಯಾನವೊಂದು ಪ್ರಾರಂಭವಾಗಿದ್ದು, ಕೊಡಗು ಜಿಲ್ಲೆಯ ಬಹುತೇಕ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳು ಚದುರಂಗ ಆಟ ಕಲಿಯುತ್ತಿದ್ದಾರೆ. ಭಾರತದಲ್ಲಿಯೇ ಆವಿಷ್ಕಾರಗೊಂಡಿರುವ, ಆಟಗಾರರ ಮಾನಸಿಕ ಆರೋಗ್ಯಕ್ಕೆ ಹಾಗೂ ಬುದ್ಧಿ ವೃದ್ಧಿಗೆ ಸಹಕಾರಿಯಾಗುವ ವಿಶ್ವ ಪ್ರಸಿದ್ಧ ಚದರಂಗ ಆಟವು ಇತ್ತೀಚೆಗಷ್ಟೆ ಚೆನ್ನೈನಲ್ಲಿ ಉದ್ಘಾಟನೆಗೊಂಡ ‘ಚೆಸ್ ಒಲಂಪಿಯಾಡ್’ ಮೂಲಕ ತನ್ನ ಪ್ರಸಿದ್ಧತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿತು. ಈ ನಡುವೆಯೇ ಜಿಲ್ಲೆಯ ಗ್ರಂಥಾಲಯಗಳಲ್ಲಿಯೂ ಈ ಪ್ರಮುಖ ಆಟಕ್ಕೆ ಪ್ರಾಮುಖ್ಯತೆ ನೀಡುವ ರಾಜ್ಯ ಸರಕಾರದ ಯೋಜನೆ ಅನುಷ್ಠಾನಗೊಂಡಿರುವ ಹಿನ್ನೆಲೆ ಗ್ರಂಥಾಲಯಗಳತ್ತ ಯುವಪೀಳಿಗೆ ಯನ್ನು ಆಕರ್ಷಿಸುವ ಮಹತ್ಕಾರ್ಯ ನಡೆಯುತ್ತಿದೆ ಹಾಗೂ ಉತ್ತಮ ಸ್ಪಂದನ ಕೂಡ ದೊರಕುತ್ತಿದೆ. ಪಂಚಾಯಿತಿಯ ಅನುದಾನದ ಮೂಲಕವೇ ಚದುರಂಗದ ಬೋರ್ಡ್ ಹಾಗೂ ಇತರ ಸಾಮಗ್ರಿಗಳನ್ನು ಖರೀದಿ ಸಲಾಗುತ್ತಿದೆ.
(ಮೊದಲ ಪುಟದಿಂದ)ಚದುರAಗ ಆಟವನ್ನು ನುರಿತವಾಗಿ ಬಲ್ಲ ಗ್ರಾಮಸ್ಥರು ಅಥವಾ ಶಿಕ್ಷಕರು, ಪಂಚಾಯಿತಿ ಸಿಬ್ಬಂದಿಗಳಿAದಲೇ ಮಕ್ಕಳು ಚದುರಂಗವನ್ನು ಕಲಿಯುತ್ತಿದ್ದಾರೆ. ಈಗಾಗಲೇ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯುತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಜಿಲ್ಲೆಗೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದು, ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಿದ್ದಾರೆ. ಮಕ್ಕಳ ಏಕಾಗ್ರತೆ ವೃದ್ಧಿಸುವಲ್ಲಿ ಸಹಕಾರಿಯಾಗಿರುವ ಈ ಆಟವನ್ನು ಶಾಲೆಗೆ ರಜೆ ಇರುವ ದಿನಗಳಲ್ಲಿಯೂ ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ಆಗಮಿಸಿ ಅಭ್ಯಸಿಸುತ್ತಿರುವುದೂ ಕಂಡು ಬಂದಿದೆ.
ಜಿಲ್ಲೆಯಲ್ಲಿ ಈಗಾಗಲೇ ಗ್ರಂಥಾಲಯಗಳು ಡಿಜಿಟಲೀಕರಣಗೊಂಡು ಅಭಿವೃದ್ಧಿ ಹೊಂದಿವೆ. ಪುಸ್ತಕ ಓದಲು ಗ್ರಂಥಾಲಯಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಒಳಾಂಗಣ ಕ್ರೀಡೆಯಾಗಿರುವ ಚದುರಂಗದೊAದಿಗೆ 'ರೂಬಿಕ್ಸ್ ಕ್ಯೂಬ್ ಸಾಲ್ವಿಂಗ' ಕೂಡ ಮಾಡುವಂತೆ ರಾಜ್ಯ ಸರಕಾರ ಚಿಂತಿಸಿತ್ತು, ಇದೀಗ ಚೆನ್ನೈನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚೆಸ್ ಒಲಂಪಿಯಾಡ್ ಪ್ರಸಿದ್ಧತೆ ಪಡೆಯುತ್ತಿರುವಾಗಲೇ ನಾವು ಈ ಚದುರಂಗ ಯೋಜನೆಯನ್ನು ಅನುಷ್ಠಾನ ಮಾಡಿದ್ದೇವೆ. ರಾಜ್ಯಾದ್ಯಂತ ಇದು ನಡೆಯಬೇಕಾಗಿ ಸೂಚನೆ ಇದೆ. ಇದಕ್ಕೆ ಜಿಲ್ಲೆಯಲ್ಲಿ ನಾವು ಕಾರ್ಯಗತವಾಗಿ ಹಲವಾರು ಗ್ರಂಥಾಲಯಗಳಲ್ಲಿ ಅನುಷ್ಠಾನಕ್ಕೆ ಕ್ರಮಕೈಗೊಂಡಿದ್ದೇವೆ. ಪಿ.ಡಿ.ಓ, ಪಂಚಾಯಿತಿ ಸಿಬ್ಬಂದಿ, ಗ್ರಂಥಾಲಯ ಸಿಬ್ಬಂದಿ ಮಕ್ಕಳಿಗೆ ತರಬೇತಿ ನೀಡುವಲ್ಲಿ ಕೈಜೋಡಿಸಿರುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಮಾಹಿತಿ ನೀಡಿದ್ದಾರೆ.
ಶಾಲೆಗಳಲ್ಲಿ ಇತರ ಪಠ್ಯಗಳೊಂದಿಗೆ ಗೃಂಥಾಲಯ ಎಂಬ ವಿಷಯ ಕೂಡ ಇರುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯ ಪಂಚಾಯಿತಿಗಳ ಸಹಯೋಗದೊಂದಿಗೆ ಶಾಲೆಯ ಸಮೀಪವೇ ಗ್ರಂಥಾಲಯಗಳಿದ್ದಲ್ಲಿ ಅಲ್ಲಿಗೆ ಮಕ್ಕಳನ್ನು ಕೊಂಡೊಯ್ದು ಚದುರಂಗ ಅಭ್ಯಸಿಸುವ ಕಾರ್ಯವನ್ನು ಮಾಡಲಾಗುತ್ತದೆ. ಇದರೊಂದಿಗೆ ಇತರ ಒಳಾಂಗಣ ಕ್ರೀಡೆಗಳನ್ನೂ ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸುವ ಚಿಂತನೆ ಇದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.