ಸುಂಟಿಕೊಪ್ಪ, ಜು.೩೧: ಸುಂಟಿಕೊಪ್ಪ ಹೋಬಳಿಯ ಕೃಷಿಕರ ಬದುಕು ಕಾಡಾನೆ ಹಾವಳಿಯಿಂದ ದುಸ್ತರವಾಗಿದೆ.
ಪ್ರತಿ ವರ್ಷ ಕಾಡಾನೆಗಳು ತೋಟಕ್ಕೆ ಲಗ್ಗೆಯಿಡುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಅನ್ನದಾತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಕೊಡಗರಹಳ್ಳಿ, ಕಂಬಿಬಾಣೆ, ಅತ್ತೂರು ನಲ್ಲೂರು, ೭ನೇ ಹೊಸಕೋಟೆ ಹಾಗೂ ತೊಂಡೂರು ಗ್ರಾಮಗಳಲ್ಲಿ ಕಳೆದ ೧ ತಿಂಗಳಿನಿAದ ೮ ಕಾಡಾನೆಗಳ ಹಿಂಡು ಈ ವಿಭಾಗದ ಬೆಳೆಗಾರರ ತೋಟಕ್ಕೆ ಬಂದು ಬಾಳೆಗಿಡ, ತೆಂಗು, ಗೆಣಸು ಗಿಡಗಳನ್ನು ತಿಂದು ಶುಂಠಿ ಬೆಳೆಯನ್ನು ತುಳಿದು ನಾಶಪಡಿಸುತ್ತಿದೆ. ಕಾಫಿ ತೋಟದಲ್ಲಿ ಎಲ್ಲೆಂದರಲ್ಲಿ ಅಡ್ಡಾಡುತ್ತಿರುವುದರಿಂದ ಕಾಫಿ ಗಿಡದ ರೆಂಬೆಗಳು ಮುರಿದು ನೆಲ ಕಚ್ಚುವುದರಿಂದ ಕೃಷಿಕರು ಕಂಗಾಲಾಗಿದ್ದಾರೆ.
ಈ ಬಗ್ಗೆ ಹಲವಷ್ಟು ಬಾರಿ ಅರಣ್ಯ ಇಲಾಖೆಯವರಿಗೆ ಮನವಿ ಸಲ್ಲಿಸಿ ಕಾಡಾನೆಗಳನ್ನು ತೋಟದಿಂದ ಕಾಡಿಗೆ ಅಟ್ಟಲು ಕೋರಿಕೊಂಡರೂ ಏನೂ ಪ್ರಯೋಜನವಾಗಿಲ್ಲ. ಯಾವಾಗಲೋ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದು ಪಟಾಕಿ ಸಿಡಿಸಿ ತೆರಳುತ್ತಾರೆ. ಪಟಾಕಿ ಸಿಡಿಸುವಾಗ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುವುದಿಲ್ಲ. ಇತ್ತೀಚೆಗೆ ಕೊಡಗರಹಳ್ಳಿಯ ಶಾಂತಿನೀಕೇತನ ಹಾಗೂ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಲೆಯಿಂದ ಹೊರ ಬರುವ ಸಮಯದಲ್ಲೇ ಅರಣ್ಯ ಇಲಾಖಾ ಸಿಬ್ಬಂದಿಗಳು ಪಟಾಕಿ ಸಿಡಿಸಿದ್ದು ಜನರಲ್ಲಿ ಆತಂಕ ಸೃಷ್ಟಿಸಿತ್ತು.
ಅತ್ತೂರು ನಲ್ಲೂರು ಗ್ರಾಮದ ಕಾಫಿ ಬೆಳೆಗಾರರಾದ ರಂಜಿತ್ ಕಾರ್ಯಪ್ಪ ಅವರ ತೋಟ ಸುಂಟಿಕೊಪ್ಪ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಎಸ್. ಮಂಜುನಾಥ, ವೆಂಕಟ್ ಏತಡ್ಕ ರಾಜೇಶ್ ಹಾಗೂ ಗಂಗಾ ಅವರ ತೋಟಕ್ಕೆ ತೀವ್ರ ನಷ್ಟವಾಗಿದೆ. ಕಾರ್ಮಿಕರು ಕೆಲಸ ನಿರ್ವಹಿಸಲು ಮುಂದೆ ಬರುತ್ತಿಲ್ಲ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸವನ್ನು ಅರಣ್ಯ ಇಲಾಖೆಯವರು ಶೀಘ್ರದಲ್ಲೇ ಮಾಡದಿದ್ದಲ್ಲಿ ಬೆಳೆಗಾರರನ್ನು ಸಂಘಟಿಸಿ ಅರಣ್ಯ ಇಲಾಖೆಯ ಕಛೇರಿಗೆ ಮುತ್ತಿಗೆ ಹಾಕಲು ಮುಂದಾಗಿ ದ್ದಾರೆ ಎಂದು ಸುತ್ತ ಮುತ್ತಲ ಗ್ರಾಮದ ಬೆಳೆಗಾರರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ೭ನೇ ಹೊಸಕೋಟೆಯಲ್ಲಿರುವ ದೀಪ್ತಿ ಶಾಲೆಯ ಗೇಟ್ ಅನ್ನು ಮುರಿದು ಆವರಣಕ್ಕೆ ನುಗ್ಗಿತ್ತು.